ಜಿಲ್ಲೆ

ಎಲ್ಲ ಶಾಸಕರ ಜತೆ ವಿವಿ ಉಳಿಸಿ ಹೋರಾಟ ಸಮಿತಿಯಿಂದ ಸಿಎಂ ಭೇಟಿ

ಹಾಸನ: ಪಕ್ಷ ಭೇದ ಮರೆತು ಪ್ರಾಮಾಣಿಕವಾಗಿ ನಿಮ್ಮ ಜತೆ ಹಾಸನ ವಿವಿ ಉಳಿಸುವ ಕೆಲಸವನ್ನು ಮಾಡಲಾಗುವುದು. ಯಾವುದೇ ರೀತಿಯ ಅನುಮಾನ ಬೇಡ. ಜಿಲ್ಲೆಯ ಎಲ್ಲ ಶಾಸಕರ ಒಟ್ಟುಗೂಡಿ ನಮ್ಮ ಜತೆ ವಿವಿ ಉಳಿಸಿ ಸಮಿತಿಯಿಂದ 15 ಜನರ ತಂಡ ಈ ವಾರದಲ್ಲಿ ದಿನ ನಿಗದಿ ಮಾಡಿ ಸಿಎಂ, ಡಿಸಿಎಂ ಹಾಗೂ ಸಚಿವರನ್ನು ಭೇಟಿ ಮಾಡುವ ಕೆಲಸ ಮಾಡಿ ಗಮನ ಸೆಳೆಯಲಾಗುವುದು ಎಂದು ಸಂಸದ ಶ್ರೇಯಸ್ ಪಟೇಲ್ ಭರವಸೆ ನೀಡಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಾಸನ ವಿಶ್ವವಿದ್ಯಾಲಯ ಉಳಿಸಿ ಬೆಳೆಸಲು ಭಾನುವಾರ ಕರೆಯಲಾಗಿದ್ದ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಮತ್ತು ಯೋಗಕ್ಷೇಮ ವಿಷಯ ಬಂದಾಗ ಪಕ್ಷ ಮರೆತು ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಬೇಕಾಗುತ್ತದೆ. ಎಲ್ಲರ ಪರ ನಿಂತುಕೊಳ್ಳುವ ಕೆಲಸ ಮಾಡಲಾಗುವುದು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜತೆಗೆ ಸಂಬಂಧಪಟ್ಟ ಸಚಿವರ ಜತೆ ಮಾತನಾಡಲಾಗುವುದು. ಸಮಿತಿ ವರದಿ ಕೂಡ ಇಲ್ಲಿವರೆಗೂ ಬಂದಿಲ್ಲ. ವಿಶ್ವವಿದ್ಯಾಲಯವನ್ನು ಮುಚ್ಚುವ ನಿರ್ಧಾರವನ್ನು ಇಲ್ಲಿಯವರೆಗೂ ತೆಗೆದುಕೊಂಡಿಲ್ಲ. ಯಾರು ಗಾಬರಿ ಪಡಬಾರದೆಂದು ಶಿಕ್ಷಣ ಸಚಿವರು ಹೇಳಿದ್ದು, ಈಗ ಅಧಿವೇಶನ ನಡೆಯುತ್ತಿರುವುದರಿಂದ ಎಲ್ಲ ಶಾಸಕರು ಒಳಗೊಂಡಂತೆ ಸಮಿತಿ ರಚಿಸಿ ಸಿಎಂ, ಡಿಸಿಎಂ ಹಾಗೂ ಸಚಿವರನ್ನು ಭೇಟಿ ಮಾಡಿ ನಮ್ಮ ಬೇಡಿಕೆಯನ್ನು ಮುಂದಿಟ್ಟು ಮನವಿ ಮಾಡೋಣ. ಈ ಹೋರಾಟದ ಸಮಿತಿ ಪರವಾಗಿ ನಾನು ಇರುತ್ತೇನೆ. ಪಕ್ಷ ಭೇದ ಮರೆತು ಪ್ರಾಮಾಣಿಕವಾಗಿ ನಿಮ್ಮ ಜತೆ ಹಾಸನ ವಿವಿ ಉಳಿಸುವ ಕೆಲಸವನ್ನು ಮಾಡಲಾಗುವುದು. ಸರ್ಕಾರದ ಮಟ್ಟದಲ್ಲಿ ನಾನು ಕೂಡ ವಿದ್ಯಾರ್ಥಿಗಳ ಪರ ಗಮನ ಸೆಳೆಯಲಾಗುವುದು ಎಂದು ಹೇಳಿದರು.

ಶಾಸಕ ಎ. ಮಂಜು ಮಾತನಾಡಿ, ವಿಶ್ವವಿದ್ಯಾಲಯ ಇಲ್ಲೇ ಉಳಿಸುವ ನಿಟ್ಟಿನಲ್ಲಿ ಆಗಬೇಕಾದ ಕೆಲಸ ತಡವಾಗಿದೆ ಎಂಬುದು ನನ್ನ ಭಾವನೆ. ಕಾಲೇಜುಗಳನ್ನು ಯಾವ ಸರ್ಕಾರ ಬಂದರೂ ಮುಚ್ಚುವುದಕ್ಕೆ ಆಗುವುದಿಲ್ಲ. ಆದರೆ ವಿಲೀನಗೊಳಿಸಲಾಗುತ್ತದೆ. ನಾನು ಶಾಸಕನಾಗಿದ್ದಾಗ ಮೈಸೂರು ಯೂನಿವರ್‌ಸಿಟಿ ಇಲ್ಲಿ ಪ್ರಾರಂಭವಾಯಿತು. ಯೂನಿವರ್‌ಸಿಟಿ ಸ್ಥಾಪನೆ ಮಾಡುವುದು ಆ ಜಿಲ್ಲೆಗಳಿಗೆ ಹೆಚ್ಚು ಗೌರವ ತರುವ ಕೆಲಸ ಮಾಡಿದ ಸರ್ಕಾರಗಳಿಗೆ ಗೌರವ ಸಲ್ಲಿಸಬೇಕು. ಅದು ಯಾವುದೇ ಸರ್ಕಾರ ಆಗಿರಲಿ. ಹಳ್ಳಿ ಸೇರಿದಂತೆ ಎಲ್ಲ ಮಕ್ಕಳಿಗೂ ವಿದ್ಯೆ ಸಿಗಬೇಕಾದರೆ ವಿವಿಗಳು ಆಯಾ ಜಿಲ್ಲೆಯಲ್ಲೇ ಇರಬೇಕು. ಆಗ ಮಾತ್ರ ಹೆಚ್ಚಿನ ಅವಕಾಶಗಳು ದೊರೆಯುತ್ತದೆ. ವಿಶ್ವವಿದ್ಯಾಲಯದ ಅಭಿವೃದ್ಧಿ ಆಗಬೇಕು. ಹೆಚ್ಚಿನ ಹೋರಾಟಕ್ಕೆ ಮುಂದಾದ ಜಿಲ್ಲೆ ಇದ್ದರೇ ಅದು ಹಾಸನ. ಈ ಹೋರಾಟದಲ್ಲಿ ಯಾವ ರಾಜಕಾರಣ ಆಗಬಾರದು. ಯೂನಿವರ್‌ಸಿಟಿ ರಾಜ್ಯ ಸರ್ಕಾರದಿಂದ ಮಾತ್ರ ನಡೆಯುವುದಿಲ್ಲ. ಕೇಂದ್ರದ ಯುಜಿಸಿ ಸ್ಕೇಲ್ ಕೂಡ ಇದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ ಮಾತನಾಡಿ, ವಿದ್ಯಾರ್ಥಿಗಳು ಇಂಜಿನಿಯರ್, ವೈದ್ಯಕೀಯ ಯಾವುದೇ ಆಗಿರಲಿ ಸರ್ಕಾರಿ ಸಂಸ್ಥೆಗಳಿಗೆ ಬರಲು ಮುಂದಾಗುತ್ತಾರೆ. ಸೀಟು ಇಲ್ಲದಾಗ ಅನಿವಾರ್ಯವಾಗಿ ಖಾಸಗಿ ಕಡೆ ಹೋಗುತ್ತಾರೆ. ಏನಾದರೂ ಈ ರೀತಿ ತಾತ್ಸಾರ ಮಾಡಿದರೆ ಮುಂದಿನ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯವರು ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಮುಂದಾದರೆ ಆಗ ಖಾಸಗಿಯವರು ಮಾಡಿದ ನಿರ್ಣಯದಂತೆ ಉನ್ನತ ಶಿಕ್ಷಣ ಸಾಗುತ್ತದೆ ಎಂದು ಎಚ್ಚರಿಸಿದರು.

ಇದರಿಂದ ಯಾವ ಯಾವ ಸಂಸ್ಥೆ ಯಾವ ಯಾವ ಮೌಲ್ಯವನ್ನು ಭಿತ್ತಬಹುದು. ಸರ್ಕಾರದವರು ಹೀಗೆ ಮುಂದುವರೆದರೆ ಬಂಡವಾಳ ಶಾಹಿಗಳು ತಮಗೆ ಬೇಕಾದ ಮೌಲ್ಯಗಳನ್ನು ಯುವ ತಲೆಮಾರಿಗೆ ಬಿತ್ತುತ್ತಾರೆ. ಇದು ಉನ್ನತ ಶಿಕ್ಷಣದ ದೊಡ್ಡ ದುರಂತದ ಸಂಗತಿ. ಈ ಹಿನ್ನಲೆಯಲ್ಲಿ ಸರ್ಕಾರಿ ಸಂಸ್ಥೆಯನ್ನು ಉಳಿಸುವುದು ಅನಿವಾರ್ಯ. ಸ್ಥಾಪನೆ ಮಾಡಿರುವ ವಿಶ್ವವಿದ್ಯಾಲಯವನ್ನು ಗಟ್ಟಿಗೊಳಿಸಬೇಕೆ ಹೊರತು ಮುಚ್ಚುವಂತಹದ್ದು ಈ ವಲಯಕ್ಕೆ ಮಾಡುವ ಅನ್ಯಾಯ. ಗ್ರಾಮಾಂತರ ಪ್ರದೇಶಕ್ಕೆ ಮಾಡುವ ದ್ರೋಹ. 1916 ರಲ್ಲಿ ಆರಂಭಗೊಂಡ ಮೈಸೂರು ವಿಶ್ವವಿದ್ಯಾಲಯ ಇಂತಹದೆ ಒಂದು ಅತಂತ್ರ ಸ್ಥಿತಿ ಅನುಭವಿಸಿತ್ತು ಎಂದು ಹೇಳಿದರು.

ಹಸಿರುಭೂಮಿ ಪ್ರತಿಷ್ಠಾನದ ಬಿ.ಕೆ. ಮಂಜುನಾಥ್ ಮಾತನಾಡಿ, ಸರ್ಕಾರದಲ್ಲಿ ಗೊಂದಲವಿದ್ದು, ಜನರಲ್ಲಿ ವಿಶ್ವವಿದ್ಯಾಲಯ ಉಳಿಯುತ್ತದೆಯೂ ಇಲ್ಲವೊ ಎಂಬುದು ಬೇರೂರಿದೆ. ಈ ಕಮಿಟಿ ಶಾಸಕರು, ಸಂಸದರು ಎಲ್ಲ ಸೇರಿ ಸಭೆ ಮಾಡಿ ದೃಢವಾದ ನಿಲುವು ತೆಗೆದುಕೊಂಡರೆ ಖಂಡಿತ ಸರ್ಕಾರ ಒಪ್ಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಹಾಸನ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯ ಡಾ. ವೈ.ಎಸ್. ವೀರಭದ್ರಪ್ಪ, ಆರ್.ಪಿ. ವೆಂಕಟೇಶ್ ಮೂರ್ತಿ, ಧರ್ಮೇಶ್, ಎಚ್.ಕೆ. ಸಂದೇಶ್, ಹುಡಾ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ, ಎಚ್.ಪಿ. ಮೋಹನ್, ಹಿರಿಯ ಪತ್ರಕರ್ತ ವೆಂಕಟೇಶ್, ಎಚ್.ಆರ್. ನವೀನ್ ಕುಮಾರ್, ಎಂ.ಜಿ. ಪೃಥ್ವಿ, ಸಾಹಿತಿ ರೂಪಾ ಹಾಸನ್, ತಾರಾಚಂದನ್, ರಮೇಶ್, ಎಂ.ಬಿ. ಪುಷ್ಪಾ, ಸಮೀರ್ ಅಹಮದ್ ಇತರರು ಉಪಸ್ಥಿತರಿದ್ದರು.