ಜಿಲ್ಲೆ

ಎಲ್ಲ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್ ವಿತರಣೆ ಸ್ವಾಗತಾರ್ಹ

ಸುಭಾಸ ಹೆಗಡೆ ಧೂಪದಹೊಂಡ

ಕುಮಟಾ: ಗುಣಮಟ್ಟ ಹಾಗೂ ಪರಿಣಾಮಕಾರಿ ಶಿಕ್ಷಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ನಿರಂತರ ಜಾರಿಗೆ ತರುತ್ತಿದ್ದು ಈ ಬಾರಿ ಸರ್ಕಾರಿ ಪದವಿ ಪ್ರಥಮ ವರ್ಷದ ಎಲ್ಲ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್ ವಿತರಿಸುತ್ತಿರುವುದು ಅತ್ಯಂತ ಸ್ವಾಗತಾರ್ಹ ಎಂದು ಜಿಪಂ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಅಭಿಪ್ರಾಯಪಟ್ಟರು.

ತಾಲೂಕಿನ ಬಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಬಿ.ಎ. ಹಾಗೂ ಬಿಕಾಂನ ಮೊದಲ ವರ್ಷ ಅಧ್ಯಯನ ಮಾಡುತ್ತಿರುವ 49 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್​ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಲ್ಯಾಪ್​ಟಾಪ್​ಗಳನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ಸರ್ಕಾರದ ಕೊಡುಗೆಯ ದುರುಪಯೋಗವಾಗದೇ ಶೈಕ್ಷಣಿಕ ಯಶಸ್ಸಿಗೆ ಸದುಪಯೋಗ ಮಾಡಿಕೊಳ್ಳಿ ಎಂದು ಹೇಳಿದರು. ತಾಪಂ ಸದಸ್ಯ ಜಗನ್ನಾಥ ನಾಯ್ಕ ಮಾತನಾಡಿದರು. ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಪಟಗಾರ, ಉಪಾಧ್ಯಕ್ಷ ರವಿ ನಾಯ್ಕ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎಸ್. ಎಸ್. ಹೆಗಡೆ, ಉಮೇಶ ದೇಶಭಂಡಾರಿ, ಶಾಂತಾರಾಮ, ಹರೀಶ ನಾಯ್ಕ, ರಾಮ ಮಡಿವಾಳ, ಬಿ.ಡಿ. ಪಟಗಾರ ಇನ್ನಿತರರು ಉಪಸ್ಥಿತರಿದ್ದರು.

ಸ್ವಾತಿ ಹಾಗೂ ವೈಶಾಲಿ ಪ್ರಾರ್ಥಿಸಿದರು. ಪ್ರೊ. ನಾಗರಾಜ ಬಿ. ಸ್ವಾಗತಿಸಿದರು. ಪ್ರಾಚಾರ್ಯ ಡಾ.ಗಂಗರಾಜು ಎಸ್. ಪ್ರಾಸ್ತಾವಿಕ ಮಾತನಾಡಿದರು. ಡಿ.ಎಸ್. ದೊಡ್ಮನೆ ವಂದಿಸಿದರು.