ಮೈಸೂರು: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರ. ಶೋಷಿತ ವರ್ಗ, ಹಿಂದುಳಿದ ವರ್ಗಗಳನ್ನು ಸಮನಾಗಿ ಕಾಣುತ್ತಿದ್ದರು. ಮಹಿಳೆಯರ ಶಿಕ್ಷಣಕ್ಕಾಗಿ ಒತ್ತು ನೀಡಿದ್ದರು ಎಂದು ಕನ್ನಡ ಪ್ರಾಧ್ಯಾಪಕ ಡಾ.ಪುರುಷೋತ್ತಮ್ ಹೇಳಿದರು.
ಮೈಸೂರು ಕನ್ನಡ ವೇದಿಕೆಯಿಂದ ನಗರದ ಸುಬ್ಬರಾಯನಕೆರೆಯ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಟಿಬಿ ಸೇರಿದಂತೆ ಇನ್ನಿತರ ಕಾಯಿಲೆಗಳಿಂದ ನಾಲ್ವಡಿಯವರ ಕುಟುಂಬಸ್ಥರು ಮೃತಪಡುತ್ತಾರೆ. ಇದನ್ನು ಕಂಡ ರಾಜರ್ಷಿ, ನಮ್ಮ ಕುಟುಂಬದವರಿಗೆ ಆದಂತಹ ಸ್ಥಿತಿ ಬೇರೆಯವರಿಗೆ ಆಗಬಾರದೆಂದು ಟಿಬಿ ಆಸ್ಪತ್ರೆ, ಕೆ.ಆರ್.ಆಸ್ಪತ್ರೆ ನಿರ್ಮಾಣ ಮಾಡಿದರು. ಹೊರ ದೇಶಕ್ಕೆ ಹೋದರೆ ಅಲ್ಲಿನ ಅಭಿವೃದ್ಧಿ ಗಮನಿಸಿ, ಅದೇ ರೀತಿ ನಮ್ಮ ರಾಜ್ಯದಲ್ಲಿ ಆಗಬೇಕೆಂದು ಅಭಿವೃದ್ಧಿ ಕಾರ್ಯ ಕೈಗೊಂಡರು ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷ ಡಾ.ಸಿ.ರೇಣುಕಾಂಬ ಮಾತನಾಡಿ, ನಾಲ್ವಡಿಯವರು ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಆಗಿನ ಕಾಲದಲ್ಲೇ ವೇಶ್ಯಾವಾಟಿಕೆ ನಿಲ್ಲಿಸಿದ್ದರು. ತಮ್ಮ ಅಕ್ಕನಿಗೆ ಪ್ಲೇಗ್ ಆಗಿ ಚಿಕಿತ್ಸೆಯ ಕೊರತೆಯಿಂದ ನಿಧನರಾದರು. ಹೀಗಾಗಿ, ಜನರಿಗೆ ತೊಂದರೆಯಾಗಬಾರದೆಂದು ಹಲವು ಆಸ್ಪತ್ರೆಗಳನ್ನು ನಿರ್ಮಾಣ ಮಾಡಿ ದಾರಿದೀಪವಾದರು ಎಂದರು.
ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಸಿ.ರೇಣುಕಾಂಬ, ಜಿ.ಗಾಯಿತ್ರಿದೇವಿ, ಅಂಬಳೆ ಶಿವಣ್ಣ, ಚೇತನ್ ಕುಮಾರ್, ಮಮತಾ, ಡಿ.ಪಿ.ಚಿಕ್ಕಣ್ಣ, ಚೆಲುವರಾಜು, ಪೃಥ್ವಿಸಿಂಗ್ ಚಾಂದಾವತ್, ಎಚ್.ಬಿ.ಮರಿಸ್ವಾಮಿ, ಎಸ್. ಶ್ಯಾಮಸುಂದರ್ ಅವರಿಗೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಮುಖಂಡರಾದ ನಾಲಾ ಬೀದಿ ರವಿ, ಬೋಗಾದಿ ಸಿದ್ದೇಗೌಡ, ಗೋಪಿ, ಗುರುಬಸಪ್ಪ, ಭವಾನಿ, ಸ್ವಾಮಿ ವನಕೆರೆ, ಮಾದಪ್ಪ, ಶಿವೇಗೌಡ, ಪೂರ್ಣಿಮಾ ಇನ್ನಿತರರಿದ್ದರು.