ಹಾಸನ: ಜಿಲ್ಲೆಯಲ್ಲಿ ಮಳೆ ಇಲ್ಲದೆ ಎಲ್ಲ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದೆ. ಆದರೆ ಸರ್ಕಾರ ಕೇವಲ ಒಂದು ತಾಲೂಕನ್ನು ಮಾತ್ರ ತೀವ್ರ ಬರಪೀಡಿತ, 4 ತಾಲೂಕು ಸಾಮಾನ್ಯ ಬರ ಪಟ್ಟಿಗೆ ಸೇರಿಸಿದೆ. ಉಳಿದ ತಾಲೂಕುಗಳನ್ನು ಶೀಘ್ರದಲ್ಲೇ ಬರಪೀಡಿತ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣದ) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಕರವೇ ಕಾರ್ಯಕರ್ತರು ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ತಕ್ಷಣವೇ ಸರ್ಕಾರ ಇದರ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಇಷ್ಟೊಂದು ಸಮಸ್ಯೆ ಇದ್ದರೂ ಕೂಡ ಜಿಲ್ಲಾ ಉಸ್ತುವಾರಿ ಸಚಿವರು ಇದರ ಬಗ್ಗೆ ಗಮನಹರಿಸಿಲ್ಲ. ಅಲ್ಲದೆ ಜಿಲ್ಲೆಗೆ ಆಗಮಿಸಿ ವಸ್ತುಸ್ಥಿತಿ ಅವಲೋಕಿಸುವ ಸೌಜನ್ಯ ಕೂಡ ಇಲ್ಲ. ಸರ್ಕಾರ ತಕ್ಷಣವೇ ಇವರನ್ನು ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಆಗಮಿಸಿ ಸುಮಾರು 2 ತಿಂಗಳಾಗಿದೆ. ಜಿಲ್ಲೆಯ ಯಾವ ಸಮಸ್ಯೆಗಳ ಬಗ್ಗೆಯೂ ಕೂಡ ಅವರು ಗಂಭೀರವಾಗಿ ಚಿಂತನೆ ನಡೆಸಿಲ್ಲ. ಜನರು ಈಗಾಗಲೇ ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ. ಇದಕ್ಕೆ ಪರಿಹಾರವಾಗಿ ಸಭೆಗಳನ್ನು ನಡೆಸಿ ಮಾರ್ಗೋಪಾಯಗಳನ್ನ ಕಂಡುಕೊಳ್ಳಬೇಕಾದವರು ಜಿಲ್ಲೆಯನ್ನು ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಜೀವನದಿ ಹೇಮಾವತಿ ಜಲಾಶಯದಲ್ಲಿ ಅಲ್ಪಸಲ್ಪ ನೀರು ಸಂಗ್ರಹವಾಗಿತ್ತು. ಆದರೆ ಇದನ್ನು ಕೂಡ ತುಮಕೂರು ಸೇರಿದಂತೆ ಇನ್ನಿತ ಜಿಲ್ಲೆಗಳು ಹಾಗೂ ತಮಿಳುನಾಡಿಗೆ ಹರಿಸುವ ಮೂಲಕ ಜಿಲ್ಲೆಯ ಜನರಿಗೆ ಅನ್ಯಾಯ ಮಾಡಿದ್ದಾರೆ. ಆದ್ದರಿಂದ ಸರ್ಕಾರ ತಕ್ಷಣವೇ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡುವವರೆಗೂ ನಮ್ಮ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದರು.
ಕರವೇ ಪ್ರತಿಭಟನೆ ಸ್ಥಳಕ್ಕೆ ಬಂದ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಸಮಸ್ಯೆ ಆಲಿಸಿ, ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್, ಪದಾಧಿಕಾರಿಗಳಾದ ಸೀತಾರಾಮ, ಬೋರೇಗೌಡ, ಅರಸೀಕೆರೆ ಹೇಮಂತ್, ತೋಫಿಕ್, ರಘು ಪಾಳ್ಯ, ದೇವಿಕಾ, ರೇಖಾ ಮಂಜುನಾಥ ಸೇರಿದಂತೆ ಇನ್ನಿತರರು ಹಾಜರಿದ್ದರು.