ಜಿಲ್ಲೆ

ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಮುಂದು

ಮೈಸೂರು: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮಾನವಾಗಿ ಬೆಳೆಯುತ್ತಿದ್ದು, ಇದು ನಾರಿ ಶಕ್ತಿ ವಿಜೃಂಭಣೆಯ ಸಂಕೇತವಾಗಿದೆ ಎಂದು ಮೈಸೂರು ರಾಮಕೃಷ್ಣ ಆಶ್ರಮದ ಶ್ರೀ ಜ್ಞಾನಯೋಗಾನಂದ ಸ್ವಾಮೀಜಿ ಹೇಳಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಪಡುವಾರಹಳ್ಳಿಯ ಮಲೆ ಮಹದೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ಅನೇಕ ವರ್ಷಗಳ ಕಾಲ ಮಹಿಳೆಯರು ಮನೆಯಿಂದ ಹೊರ ಬರುತ್ತಿರಲಿಲ್ಲ. ಆದರೀಗ ಮಹಿಳೆ ಸ್ವಾವಲಂಬಿ ಆಗುತ್ತಿದ್ದು, ಎಲ್ಲ ಕ್ಷೇತ್ರದಲ್ಲೂ ತನ್ನ ಹೆಜ್ಜೆ ಗುರುತು ಮೂಡಿಸುತ್ತಿದ್ದಾಳೆ. ಇದರಿಂದ ಸಮ ಸಮಾಜ ನಿರ್ಮಾಣ, ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.


ಭಗವಂತನನ್ನು ತಲುಪಲು ಸುಲಭ ಮಾರ್ಗ ಭಕ್ತಿ. ಸ್ವಾಮಿ ವಿವೇಕಾನಂದರ ಮಾತಿನಂತೆ ಸಮಾಜಕ್ಕೆ ಸೇವೆ ಮತ್ತು ಧಾರ್ಮಿಕತೆಯ ಅಗತ್ಯ ಇದೆ ಎಂದರು.
ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಟನೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವಿಶ್ವಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಇದು ಕೇವಲ ಭಕ್ತಿಗೆ ಸೀಮಿತವಾಗದೆ, ಸಾಮಾಜಿಕ ಸಬಲತೆಗೂ ಶ್ರಮಿಸುತ್ತಿದೆ ಎಂದರು.


ಶಾಸಕ ಜಿ.ಟಿ.ದೇವೇಗೌಡ, ನಗರ ಪಾಲಿಕೆ ಸದಸ್ಯೆ ಭಾಗ್ಯ ಮಾದೇಶ, ಮೈಸೂರು ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ, ಪಡುವಾರಹಳ್ಳಿ ಗ್ರಾಮಾಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಮೆಲ್ಲಹಳ್ಳಿ ಮಹದೇವಸ್ವಾಮಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಜಿಲ್ಲಾ ನಿರ್ದೇಶಕ ಎಂ.ಲಕ್ಷ್ಮಣ್, ಯೋಜನಾಧಿಕಾರಿ ನಂದಿನಿ ಶೇಟ್ ಇನ್ನಿತರರಿದ್ದರು.