ಜಿಲ್ಲೆ

ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರ ಸಾಮರ್ಥ್ಯ ಸಾಬೀತು

ವಿಜಯವಾಣಿ ಸುದ್ದಿಜಾಲ ಗದಗ

ಮಹಿಳೆಯರು ಎಲ್ಲಾ ರಂಗದಲ್ಲಿ ಸಾಧನೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಪುರುಷರ ಸರಿಸಮಾನವಾಗಿ ಹೆಜ್ಚೆ ಹಾಕುತ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಆದ್ದರಿಂದ ಸ್ಲಂ ಪ್ರದೇಶದ ಮಹಿಳೆಯರು ತಮ್ಮ ಬದುಕನ್ನು ಬದಲಾವಣೆ ಮಾಡಿಕೊಳ್ಳಬೇಕಾದರೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಗದಗ ಶಹರದ ಮಹಿಳಾ ಪೊಲೀಸ್ ಠಾಣೆಯ ಪಿಎಸ್​ಐ ಎಚ್.ಡಿ. ಓದುಗೌಡ್ರ ಹೇಳಿದರು.

ನಗರದ ಲಯನ್ಸ್ ಹಾಲ್​ನಲ್ಲಿ ಸ್ಲಂ ಜನಾಂದೋಲನ ಕರ್ನಾಟಕ, ಜಿಲ್ಲಾ ಸ್ಲಂ ಸಮಿತಿ, ಜಿಲ್ಲಾ ಸ್ಲಂ ಮಹಿಳಾ ಸಮಿತಿಯಿಂದ ಶನಿವಾರ ಆಯೋಜಿಸಿದ್ದ ಮಹಿಳಾ ನಾಯಕತ್ವ ಕುರಿತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನದ ಪ್ರಕಾರ ಸಮಾಜದಲ್ಲಿ ಎಲ್ಲರೂ ಸಮಾನರು. ಮಹಿಳೆಯರ ಮೇಲೆ ನಡೆಯುವ ಶೋಷಣೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬ ಮಹಿಳೆ ಕೂಡ ಕಾನೂನಿನ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುವುದು ಅತ್ಯವಶ್ಯವಿದೆ. ಸಮಾಜದಲ್ಲಿ ತಮ್ಮ ಹಕ್ಕುಗಳನ್ನು ಪಡೆದುಕೊಂಡು ಜೀವನ ಮಟ್ಟ ಸುಧಾರಿಸಿಕೊಳ್ಳಬೇಕು. ಮಹಿಳೆಯರ ಸುರಕ್ಷತೆ ಮತ್ತು ರಕ್ಷಣೆಗಾಗಿ ಹಲವಾರು ಕಾನೂನುಗಳಿದ್ದು ಇವುಗಳ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ವಕೀಲೆ ಶೋಭಾ ಉಮಚಗಿ ಮಾತನಾಡಿ, ದಮನಿತ ಮಹಿಳೆಯರಿಗೆ ಕಾನೂನು ಅರಿವು ಅಗತ್ಯವಾಗಿದೆ. ಮಹಿಳೆಯರು ಮೊದಲು ಸಂಘಟಿತರಾಗಬೇಕು ಎಂದರು.

ಜಿಲ್ಲಾ ಸ್ಲಂ ಸಮಿತಿ ಆಧ್ಯಕ್ಷ ಇಮ್ತಿಯಾಜ್ ಮಾನ್ವಿ, ಪ್ರಗತಿಪರ ಚಿಂತಕ ಬಸವರಾಜ ಪೂಜಾರ ಮಾತನಾಡಿದರು.

ಮಹಿಳಾ ಸಮಿತಿ ಸಂಚಾಲಕಿ ಮೆಹರುನಿಸಾ ಢಾಲಾಯತ ಅಧ್ಯಕ್ಷತೆ ವಹಿಸಿದರು. ಮಹಿಳಾ ಸಮಿತಿಯ ದಾವಲಬಿ ಕೌತಾಳ, ವಿಶಾಲಾಕ್ಷಿ ಹಿರೇಗೌಡ್ರ, ವಂದನಾ ಶ್ಯಾವಿ, ಸಕ್ರುಬಾಯಿ ಗೋಸಾವಿ, ರೇಶ್ಮಾ ನಾಗನೂರ, ಹಾಲಪ್ಪ ಮಂಡಲಗೇರಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸ್ಲಂ ಸಮಿತಿ ಉಪಾಧ್ಯಕ್ಷ ರವಿಕುಮಾರ ಬೆಳಮಕರ ನಿರೂಪಿಸಿ ವಂದಿಸಿದರು.