ಕಾರವಾರ: ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುವ ಎಲ್ಲ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಸೂಚಿಸಿದರು.
ಜೂನ್ 24 ರಿಂದ ನಡೆಯಲಿರುವ ಎಸ್ಎಸ್ಎಲ್ಸಿ ಪರೀಕ್ಷೆಯ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಿಂದ ಎಲ್ಲ ತಹಸೀಲ್ದಾರ್ ಹಾಗೂ ಬಿಇಒಗಳ ವಿಡಿಯೋ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ಒಂದು ಗಂಟೆ ಮುಂಚಿತವಾಗಿ ಮಾಸ್ಕ್ ಧರಿಸಿ ಬರುವಂತೆ ಸೂಚಿಸಬೇಕು. ಎಲ್ಲ ಕೇಂದ್ರಗಳಲ್ಲಿ ಹೆಚ್ಚುವರಿಯಾಗಿ 200 ಮಾಸ್ಕ್ ಸಂಗ್ರಹ ಇಟ್ಟುಕೊಳ್ಳಬೇಕು. ಎಲ್ಲ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ಮಾಡಿ ಕೈಗೆ ಸ್ಯಾನಿಟೈಸರ್ ಹಾಕಿ ಶುದ್ಧ ಮಾಡಬೇಕು. ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ ಬೇರೆ ಜಿಲ್ಲೆಯ ವಿದ್ಯಾರ್ಥಿಗಳ ಪಟ್ಟಿ ಮಾಡಿಟ್ಟುಕೊಳ್ಳಬೇಕು. ಪ್ರವೇಶ ಪತ್ರ ತರದೇ ಇದ್ದರೂ ಪಟ್ಟಿ ನೋಡಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ನಿಷೇಧಿತ ವಲಯ ಎಂದು ಘೊಷಿಸಲಾಗುವುದು. ಸುತ್ತಲಿನ ಜೇರಾಕ್ಸ್ ಅಂಗಡಿಗಳನ್ನು ಮುಚ್ಚಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಮಾತನಾಡಿ, ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 40 ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 35 ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದ್ದು, ಸಮಯಕ್ಕೆ ಸರಿಯಾಗಿ ಪ್ರಶ್ನೆ ಪತ್ರಿಕೆ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು. ಕಾರವಾರ ಡಿಡಿಪಿಐ ಹರೀಶ ಗಾಂವಕರ್, ಶಿರಸಿ ಡಿಡಿಪಿಐ ದಿವಾಕರ ಶೆಟ್ಟಿ ಇದ್ದರು.