ಮೈಸೂರು: ಕೈದಿಗಳ ಸುರಕ್ಷತೆ ದೃಷ್ಟಿಯಿಂದ ರಾಜ್ಯದ ಎಲ್ಲ ಕಾರಾಗೃಹಗಳಲ್ಲೂ ಸಿಸಿ ಕ್ಯಾಮರಾ ಅಳವಡಿಕೆ ಮಾಡಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗುವುದು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ತಿಳಿಸಿದರು.
ಮೂವರು ಸಜಾ ಕೈದಿಗಳು ಕೇಕ್‌ಗೆ ಮಿತಿಮೀರಿದ ಪ್ರಮಾಣದಲ್ಲಿ ಎಸೆನ್ಸ್ ಬೆರೆಸಿ ತಿಂದು ಮೃತಪಟ್ಟ ಪ್ರಕರಣದ ಹಿನ್ನೆಲೆಯಲ್ಲಿ ಮೈಸೂರು ಕೇಂದ್ರ ಕಾರಾಗೃಹ ಮತ್ತು ಕೆ.ಆರ್.ಆಸ್ಪತ್ರೆಗೆ ಸೋಮವಾರ ಆಯೋಗದ ಸದಸ್ಯ ಎಸ್.ಕೆ.ವೆಂಟಿಗೋಡಿ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಘಟನೆ ಬಳಿಕ ಕೈದಿಗಳ ಹಿತದೃಷ್ಟಿಯಿಂದ ಎಲ್ಲ ಕಾರಾಗೃಹಗಳಲ್ಲೂ ಮತ್ತು ಅದರೊಳಗಿನ ಕೈದಿಗಳು ಕೆಲಸ ಮಾಡುವ ಉತ್ಪಾದನಾ ಘಟಕಗಳಿಗೂ ಸಿಸಿ ಕ್ಯಾಮರಾ ಅಳವಡಿಕೆ ಮಾಡಬೇಕು. ಕೈದಿಗಳ ಮೇಲೆ ಕಣ್ಗಾವಲು ಇಡುವ ಮೂಲಕ ಅವಘಡಗಳನ್ನು ತಪ್ಪಿಸಲು ಕ್ರಮ ವಹಿಸಬೇಕೆಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.
ನಗರದ ಕೇಂದ್ರ ಕಾರಾಗೃಹದ ಮೂವರು ಸಜಾ ಕೈದಿಗಳಾದ ಗುಂಡ್ಲುಪೇಟೆ ನಿವಾಸಿ ಮಾದೇಶ (36), ಕೊಳ್ಳೇಗಾಲ ನಿವಾಸಿ ನಾಗರಾಜ್ (32), ಅತ್ಯಾಚಾರ ಪ್ರಕರಣದ ಅಪರಾಧಿ ಸಕಲೇಶಪುರ ನಿವಾಸಿ ರಮೇಶ್ (30) ಮೃತಪಟ್ಟಿದ್ದರು.
ಕಾರಾಗೃಹದಲ್ಲಿನ ಬೇಕರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಈ ಮೂವರು, ಡಿಸೆಂಬರ್ 24ರಂದು ಕೆಲಸದ ನಡುವೆ ಕೇಕ್‌ಗೆ ಮಿತಿಮೀರಿದ ಪ್ರಮಾಣದಲ್ಲಿ ಎಸೆನ್ಸ್ ಬೆರೆಸಿ ತಿಂದಿದ್ದರು. ಇದರಿಂದ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಜೈಲು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಾದಾಗ ಮೃತಪಟ್ಟಿದ್ದರು.