ಜಿಲ್ಲೆ

ಎಲ್ಲ ಇಲಾಖೆಗಳ ಮಾತೃ ಕಂದಾಯ ಇಲಾಖೆ

ಹೊಳೆನರಸೀಪುರ: ಕಂದಾಯ ಇಲಾಖೆ ಎಲ್ಲ ಇಲಾಖೆಗಳಿಗೂ ಮಾತೃ ಇಲಾಖೆಯಾಗಿ ಸಾರ್ವಜನಿಕರ ಕೆಲಸ ಮಾಡುತ್ತಿದೆ ಎಂದು ತಹಸೀಲ್ದಾರ್ ವಿಶ್ವನಾಥ್ ಹೇಳಿದರು. ತಾಲೂಕಿನ ಕಸಬಾ ಹೋಬಳಿ ತೆವಡಹಳ್ಳಿ ಗ್ರಾಮದಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ದೇವನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರ ಕುಂದು ಕೊರತೆಯನ್ನು ಆಲಿಸಿ ಸ್ಥಳದಲ್ಲೇ ಸಾಧ್ಯವಾದಷ್ಟು ಸಮಸ್ಯೆ ಬಗೆಹರಿಸಲು ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಹಾಜರಿದ್ದಾರೆ. ತಮ್ಮ ಗ್ರಾಮಕ್ಕೆ ಸಂಬಂಧಿಸಿದ ಜಟಿಲವಾದ ಕೆಲಸ ಕಾರ್ಯಗಳು, ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ ಸಮಸ್ಯೆ, ಸಾರಿಗೆ ಸಮಸ್ಯೆ ಸೇರಿದಂತೆ ಮೂಲಸೌಲಭ್ಯಗಳು ಕುಂಠಿತಗೊಂಡಿದ್ದರೆ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ತಮಗೆ ಆಗಬೇಕಾದ ವಿಷಯ ಕುರಿತಂತೆ ಅರ್ಜಿ ನೀಡಿದರೆ ಪರಿಶೀಲಿಸಿ ತುರ್ತು ಕ್ರಮ ಜರುಗಿಸುವುದಾಗಿ ಹೇಳಿದರು.


ಕಂದಾಯ ಇಲಾಖೆಯಲ್ಲಿ ಮುಖ್ಯವಾಗಿ ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಇತ್ತೀಚಿಗೆ ಪಿಂಚಣಿ ಯೋಜನೆ ಪಡೆಯಲು ಆಧಾರ್ ಕಾರ್ಡ್ ಅಥವಾ ಮತದಾರನ ಗುರುತಿನ ಚೀಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ 72 ಗಂಟೆಗಳಲ್ಲಿ ಪಿಂಚಣಿ ಜಾರಿಯಾಗುತ್ತದೆ. ಮಂಜೂರಾತಿ ಪತ್ರವನ್ನು ತಮ್ಮ ಕಚೇರಿಯಲ್ಲೇ ಪಡೆದುಕೊಳ್ಳಬಹುದು ಎಂದರು.


ಪ್ರಸ್ತುತ ಚುನಾವಣಾ ವರ್ಷವಾದ್ದರಿಂದ 18 ವರ್ಷ ಮೇಲ್ಪಟ್ಟ ಯುವಕ ಯುವತಿಯರು ಕೂಡಲೇ ಮತದಾರರ ಪಟ್ಟಿಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಮತದಾನ ಮಾಡುವಾಗ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಯಾವುದೇ ದಾಖಲಾತಿ ತೋರಿಸಿದರೆ ಮತದಾನ ಮಾಡಬಹುದು ಮತದಾನ ಪಟ್ಟಿಯಲ್ಲಿ ಹೆಸರಿಲ್ಲದವರು ತಮ್ಮ ವ್ಯಾಪ್ತಿಯ ಬಿಎಲ್‌ಒ ಗಳನ್ನು ಕೂಡಲೇ ಸಂಪರ್ಕಿಸಬೇಕೆಂದು ಸಲಹೆ ನೀಡಿದರು.


ತಾಲೂಕಿನ ಎಲ್ಲ ಸರ್ಕಾರಿ ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಗೆ ಬರುವ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪ್ರಭಾರ ಸಿಡಿಪಿಒ ಭಾಗ್ಯಮ್ಮ, ತೋಟಗಾರಿಕೆ ಇಲಾಖೆಯ ಭವ್ಯ, ಆಹಾರ ಇಲಾಖೆಯ ಶೋಭಾ, ಸಮಾಜ ಕಲ್ಯಾಣ ಅಧಿಕಾರಿ ಕೌಸರ್ ಅಹಮದ್, ತಾಲೂಕು ಆರೋಗ್ಯ ವೈದ್ಯ ಆಡಳಿತಾಧಿಕಾರಿ ಡಾ.ರಾಜೇಶ್, ರಾಜಸ್ವ ನಿರೀಕ್ಷಕ ಸತೀಶ್, ಎಡಿಎಲ್‌ಆರ್ ಮಂಜೇಶ್, ಪಶು ಇಲಾಖೆಯ ಕೃಪ, ಗ್ರಾ.ಪಂ.ಅಧ್ಯಕ್ಷ ಹಾಗೂ ಸದಸ್ಯರು, ಗ್ರಾಮಲೆಕ್ಕಿಗ ಹರೀಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.