ಬಾಗಲಕೋಟೆ: ವಿಭಿನ್ನ ಕಥಾ ಹಂದರ ಹೊಂದಿರುವ ಎಲ್ಟು ಮುತ್ತಾ ಕನ್ನಡ ಚಲನಚಿತ್ರವು ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಸತ್ಯ ಶ್ರೀನಿವಾಸನ್ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈ ೫ ಸ್ಟುಡಿಯೋ ಹಾಗೂ ಎಸಿಎಫ್ ೨೨ ಪ್ರೊಡಕ್ಸನ್ ಅಡಿಯಲ್ಲಿ ಚಿತ್ರವು ನಿರ್ಮಾಣವಾಗಿದೆ. ಮಡಿಕೇರಿಯ ಮಣ್ಣಿನ ಕಥೆ ಇದಾಗಿದ್ದು, ಎರಡು ಪಾತ್ರಗಳ ಮಧ್ಯೆ ಕಥಾಹಂದರವು ಇದೆ. ನೈಜ ಘಟನೆಯೊಂದನ್ನು ಆಧಾರವಾಗಿ ಇಟ್ಟುಕೊಂಡು ಈ ಚಿತ್ರವು ನಿರೂಪಿತವಾಗಿದೆ.
ಸಾವಿನ ಮನೆಯಲ್ಲಿ ಡೋಲು ಹೊಡೆಯುವ ಕುಟುಂಬದ ಸುತ್ತ ಈ ಚಿತ್ರ ಸಾಗುತ್ತದೆ. ಮುತ್ತಾನ ಕಥೆಯನ್ನು ನಿರೂಪಿಸುವ ಎಲ್ಟು ಪಾತ್ರದಲ್ಲಿ ನಿರ್ದೇಶಕ ಸೂರ್ಯ ಅವರೇ ಕಾಣಿಸಿಕೊಂಡಿದ್ದಾರೆ. ಮುತ್ತಾ ಆಗಿ ಶೌರ್ಯ ಪ್ರತಾಪ್ ನಟಿಸಿದ್ದಾರೆ. ಕಡಿಮೆ ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಿಸಲಾಗಿದ್ದು, ಎಲ್ಲರಿಗೂ ಮನಮುಟ್ಟುವಂತಹ ದೃಶ್ಯಗಳಿವೆ ಎಂದು ತಿಳಿಸಿದರು.
ಈಗಾಗಲೆ ಚಿತ್ರೀಕರಣವೂ ಪೂರ್ಣಗೊಂಡಿದ್ದು, ಜುಲೈ ಕೊನೆಯ ವಾರದಲ್ಲಿ ಅಥವಾ ಆಗಷ್ಟ ಮೊದಲ ವಾರದಲ್ಲಿ ರಾಜ್ಯಾದ್ಯಂತ ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ ಎಂದು ತಿಳಿಸಿದರು.
ನಿರ್ದೇಶಕ ಸೂರ್ಯ ಮಾತನಾಡಿ, ಈ ಚಿತ್ರವು ನನ್ನ ಮೊದಲ ನಿರ್ದೇಶನವಾಗಿದೆ. ಮಡಿಕೇರಿ ಸುತ್ತಮುತ್ತ ಬಹುತೇಕ ಚಿತ್ರೀಕರಣವಾಗಿದ್ದು, ಅಲ್ಲದೆ ಕನಕಪುರದಲ್ಲಿಯೂ ಚಿತ್ರೀಕರಣ ನಡೆದಿದೆ. ಈಗಾಗಲೇ ಹುಬ್ಬಳ್ಳಿಯಲ್ಲಿ ಆಡಿಯೋ ಬಿಡುಗಡೆ ಮಾಡಿದ್ದು, ಎಲ್ಟು ಮುತ್ತಾ ಚಿತ್ರವು ಯುವ ನಟ-ನಟಿಯರು ಚಿತ್ರದಲ್ಲಿ ನಟಿಸಿದ್ದಾರೆ.
ನಾಯಕನಟ ಶೌರ್ಯ ಪ್ರತಾಪ್, ಸಂಗೀತ ನಿರ್ದೇಶಕ ಪ್ರಸನ್ ಕೇಶವ್, ಮೇಯಪ್ಪ ಭಾಸ್ಕರ್, ರೋಹನ್ ಆರ್ಯ, ಪ್ರಿಯಾಂಕಾ ಮಲಾಲಿ ಇದ್ದರು.