ಚಾಮರಾಜನಗರ: ನಗರದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಮೂರು ವರ್ಷದ ಎಲ್ಎಲ್ಬಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ಪದವಿಯಲ್ಲಿ ತೇರ್ಗಡೆ ಹೊಂದಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳು ಪದವಿಯಲ್ಲಿ ಶೇ.40 ರಷ್ಟು, ಹಿಂದುಳಿದ ವರ್ಗದ ಅಭ್ಯರ್ಥಿಗಳು ಶೇ.42 ರಷ್ಟು ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇ.45ರಷ್ಟು ಅಂಕ ಪಡೆದಿರಬೇಕು. ವರ್ಗವನ್ನು ಲೆಕ್ಕಿಸದ ಅರ್ಹತೆಯ ಆಧಾರದ ಮೇಲೆ ಎಲ್ಲ ಅಭ್ಯರ್ಥಿಗಳ ಕ್ರೋಡೀಕೃತ ಪಟ್ಟಿಯನ್ನು ಆ.13ರಂದು ಪ್ರಕಟಿಸಲಾಗುವುದು. ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ಆಯ್ಕೆಯಾದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಆ.16ರಂದು ಪ್ರಕಟಿಸಲಾಗುವುದು. ಮೊದಲ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ದಂಡವಿಲ್ಲದೆ ಪ್ರವೇಶಕ್ಕೆ ಆ.26 ಕೊನೆಯ ದಿನವಾಗಿದೆ. ಮೊದಲ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ 500 ರೂ. ದಂಡದೊಂದಿಗೆ ಪ್ರವೇಶಕ್ಕೆ ಆ.29 ಕಡೆಯ ದಿನವಾಗಿದೆ. ಅರ್ಹತೆ ಮತ್ತು ಮೀಸಲಾತಿ ಆಧಾರದ ಮೇಲೆ ಆಯ್ಕೆಯಾದ ಪ್ರಥಮ ಪಟ್ಟಿಯಲ್ಲಿ ಭರ್ತಿಯಾಗದ ಸ್ಥಾನಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಆ.30ರಂದು ಪ್ರಕಟಿಸಲಾಗುವುದು. ಎರಡನೇ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ದಂಡವಿಲ್ಲದ ಪ್ರವೇಶಕ್ಕೆ ಸೆ.2 ಕೊನೆಯ ದಿನವಾಗಿದೆ. ಎರಡನೇ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ 500 ರೂ. ದಂಡದೊಂದಿಗೆ ಪ್ರವೇಶಕ್ಕೆ ಸೆ.4 ಕಡೆಯ ದಿನವಾಗಿದೆ. ಪ್ರಥಮ ವರ್ಷದ ತರಗತಿಗಳು ಸೆ.1ರಂದು ಪ್ರಾರಂಭವಾಗಲಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ನಗರದ ಸಂತೇಮರಹಳ್ಳಿ ರಸ್ತೆಯಲ್ಲಿರುವ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳದೊಂದಿಗೆ ದೃಢೀಕರಿಸಿ ಮೂರು ಪ್ರತಿಯಲ್ಲಿ ಆ.11ರ ಸಂಜೆ 5 ಗಂಟೆಯ ಒಳಗಾಗಿ ಕಾನೂನು ಕಾಲೇಜಿಗೆ ಸಲ್ಲಿಸಬೇಕು. ಕಾಲೇಜಿನಲ್ಲಿ ಸ್ವೀಕರಿಸಿದ ಒಂದು ಪ್ರತಿಯನ್ನು ಅಭ್ಯರ್ಥಿಗಳ ಸ್ವತಃ ನೋಂದಾಯಿತ ಅಥವಾ ತ್ವರಿತ ಅಂಚೆಯ ಮೂಲಕ ಕುಲಸಚಿವರು, ಶೈಕ್ಷಣಿಕ ವಿಭಾಗ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ನವನಗರ, ಹುಬ್ಬಳ್ಳಿ-580025 ಇವರಿಗೆ ಸಲ್ಲಿಸಿ ಸ್ವೀಕೃತಿ ಪತ್ರದ ಜೆರಾಕ್ಸ್ ಪ್ರತಿಯನ್ನು ಕಾಲೇಜಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಗರದ ಸಂತೇಮರಹಳ್ಳಿ ರಸ್ತೆಯಲ್ಲಿರುವ ಸರ್ಕಾರಿ ಕಾನೂನು ಕಾಲೇಜಿನ ಕಚೇರಿಯನ್ನು ಸಂಪರ್ಕಿಸುವಂತೆ ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.