ಮೈಸೂರು: ನಗರದ ರಾಮಾನುಜ ರಸ್ತೆಯ 9ನೇ ಕ್ರಾಸ್ ಬಳಿಯ ಎಲೆತೋಟದಲ್ಲಿ ಮತ್ತೆ ಮೊಸಳೆ ಕಾಣಿಸಿಕೊಂಡಿದ್ದು, ಮೊಸಳೆಯು ಕರುವೊಂ ದನ್ನು ಬಲಿ ಪಡೆದಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
ಎಲೆತೋಟದ ರಾಜಾಕಾಲುವೆಯಲ್ಲಿ ಅ.15 ರಂದು ಮೊಸಳೆ ಕಾಣಿಸಿಕೊಂಡಿತ್ತು. ಆ ಸಂದರ್ಭ ಅರಣ್ಯ ಇಲಾಖೆ ಮೊಸಳೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿತು. ಆದರೆ, ರಾಜಾಕಾಲುವೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಅಡ್ಡಿ ಎದುರಾಗಿತ್ತು. ಇದೀಗ ಮತ್ತೆ ಮೊಸಳೆ ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ.
ರಾಮಾನುಜ ರಸ್ತೆಯ 9ನೇ ಕ್ರಾಸ್‌ನಲ್ಲಿ ಮೇಯುತ್ತಿದ್ದ ಕರುವೊಂದನ್ನು ಮೊಸಳೆ ಭಾನುವಾರ ಬಲಿ ಪಡೆದಿದ್ದು, ಕರುವನ್ನು ಮೊಸಳೆಯು ಹೊಂಡದ ಕಡೆಗೆ ಎಳೆದೊಯ್ದಿದೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮೂರು ಮೋಟಾರ್ ಬಳಸಿ ಹೊಂಡದಲ್ಲಿದ್ದ ನೀರನ್ನು ಹೊರ ಹಾಕುವ ಕಾರ್ಯ ಪ್ರಾರಂಭಿಸಿದರು. ಆದರೆ, ಹೊಂಡಕ್ಕೆ ಚರಂಡಿ ನೀರು ತುಂಬಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಹೊಂಡದಲ್ಲಿ ನೀರು ಖಾಲಿಯಾಗಲಿಲ್ಲ. ಸಂಜೆವರೆಗೂ ಮೊಸಳೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯಿತು. ಕತ್ತಲಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಆರ್‌ಎಫ್‌ಓ ಕೆ.ಸುರೇಂದ್ರ, ಡಿಆರ್‌ಎಫ್‌ಓಗಳಾದ ವೆಂಕಟಾಚಲ ಮತ್ತು ಸಂಜೀವ್ ಪಾಟೀಲ್, ಇಬ್ಬರು ಗಾರ್ಡ್, ಆರು ವಾಚರ್, ಮೃಗಾಲಯದಿಂದ ನಾಲ್ವರು ಮೊಸಳೆ ನಿಲಯ ಪಾಲಕರು, ಪಾಲಿಕೆಯ ಅಭಯ ತಂಡದ ಎಂಟು ಸಿಬ್ಬಂದಿ ಪಾಲ್ಗೊಂಡಿದ್ದರು.