ಜಿಲ್ಲೆ

ಎಲೆಕ್ಷನ್‌ಗೆ ‘ಒಬಿಸಿ’ ಮೀಸಲು ಗ್ರಹಣ

ಜಗನ್ನಾಥ್ ಕಾಳೇನಹಳ್ಳಿ ತುಮಕೂರು

ಮೈಸೂರು, ಮಂಗಳೂರು, ಶಿವಮೊಗ್ಗ, ತುಮಕೂರು ಸೇರಿ ವಿವಿಧ ಮಹಾನಗರ ಪಾಲಿಕೆಗಳ ಮೇಯರ್, ಉಪಮೇಯರ್ ಚುನಾವಣೆಗೆ ‘ಒಬಿಸಿ’ ಮೀಸಲು ಗ್ರಹಣ ತಟ್ಟಿದೆ.

ರಾಜ್ಯದ 10 ಮಹಾನಗರ ಪಾಲಿಕೆಗಳ ಪೈಕಿ 7 ತಿಂಗಳ ಹಿಂದೆ ಚುನಾವಣೆ ನಡೆದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿ ಮಹಾನಗರ ಪಾಲಿಕೆಗಳ ಚುನಾಯಿತ ಮಂಡಳಿಗಳೇ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ಅಲ್ಲಿನ್ನೂ ಮೊದಲ ಅವಧಿಗೆ ಮೇಯರ್, ಉಪಮೇಯರ್ ಚುನಾವಣೆ ನಡೆದಿಲ್ಲ. ಜನವರಿ-ಫೆಬ್ರವರಿ ಅಂತ್ಯಕ್ಕೆ ಕೊನೆಗೊಂಡಿರುವ ತುಮಕೂರು, ಮೈಸೂರು, ಮಂಗಳೂರು, ಶಿವಮೊಗ್ಗ ಪಾಲಿಕೆಗಳ ಮೇಯರ್, ಉಪಮೇಯರ್ ಸ್ಥಾನದ ಮುಂದಿನ ಅವಧಿಗೆ ಚುನಾವಣೆ ನಡೆಸಲು ಇನ್ನೂ ಮೀಸಲು ನಿಗದಿಪಡಿಸಿಲ್ಲ. ಈ ನಡುವೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇತರ ಹಿಂದುಳಿದ ವರ್ಗದವರಿಗೆ ಮೀಸಲು (ಒಬಿಸಿ) ಕಲ್ಪಿಸುವ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವುದರಿಂದ ಮೇಯರ್, ಉಪಮೇಯರ್ ಚುನಾವಣೆಗೆ ದೊಡ್ಡ ವಿಘ್ನ ಎದುರಾಗಿದೆ.

ಆಯೋಗ ರಚನೆ: ಒಬಿಸಿ ಮೀಸಲಾತಿಗೆ ಸಂಬಂಧಿಸಿ ಎದ್ದಿರುವ ಗೊಂದಲ ಇತ್ಯರ್ಥಕ್ಕೆ ರಾಜ್ಯ ಸರ್ಕಾರವು ಆಯೋಗ ರಚಿಸುವ ತೀರ್ಮಾನವನ್ನು ಮಾ.31ರಂದು ನಡೆದ ವಿಧಾನಮಂಡಲದ ಉಭಯ ಸದನಗಳ ಸಭಾನಾಯಕರ ಸಭೆಯಲ್ಲಿ ಕೈಗೊಳ್ಳಲಾಗಿದೆ. ಒಬಿಸಿ ಮೀಸಲು ಗೊಂದಲದಿಂದ ಜಿಪಂ, ತಾಪಂ ಚುನಾವಣೆ ಅಲ್ಲದೆ, ಮಹಾನಗರ ಪಾಲಿಕೆಗಳ ಮೇಯರ್, ಉಪಮೇಯರ್ ಚುನಾವಣೆ ಮೇಲೂ ಕಾರ್ಮೋಡ ಆವರಿಸುವಂತೆ ಮಾಡಿದೆ. ಫೆಬ್ರವರಿಗೆ ಅಂತ್ಯ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಅವಧಿ ಫೆ.26ಕ್ಕೆ ಮುಕ್ತಾಯವಾಗಿದ್ದು, ಸರ್ಕಾರ ಮೀಸಲಾತಿ ಪ್ರಕಟಿಸಿಲ್ಲ. ಈಗ ಒಬಿಸಿ ಮೀಸಲು ಗೊಂದಲ ಎದ್ದಿರುವುದರಿಂದ ಅದು ಬಗೆಹರಿಯುವವರೆಗೆ ಮೇಯರ್, ಉಪಮೇಯರ್ ಸ್ಥಾನಕ್ಕೂ ಮೀಸಲು ನಿಗದಿಪಡಿಸುವ ಗೋಜಿಗೆ ಸರ್ಕಾರ ಹೋಗುವ ಸಾಧ್ಯತೆ ಇಲ್ಲ. ಹಾಗಾಗಿ, ಹಾಲಿ ಮೇಯರ್, ಉಪಮೇಯರ್‌ಗೆ ಇನ್ನೂ 3 ತಿಂಗಳು ಅಧಿಕಾರದಲ್ಲಿ ಮುಂದುವರಿಯುವ ಸೌಭಾಗ್ಯ ಒದಗಿ ಬರಲಿದೆ ಎನ್ನಲಾಗಿದೆ. ವಿಜಯಪುರ ಪಾಲಿಕೆ ಚುನಾಯಿತ ಮಂಡಳಿ ಅವಧಿ ಅಂತ್ಯಗೊಂಡು ಎರಡೂವರೆ ವರ್ಷಗಳೇ ಕಳೆದರೂ ವಾರ್ಡ್‌ವಾರು ಮೀಸಲಾತಿ ನಿಗದಿ ವಿವಾದ ಕೋರ್ಟ್ ಮೆಟ್ಟಿಲೇರಿರುವುದರಿಂದ ಈವರೆಗೆ ಚುನಾವಣೆ ನಡೆಸಲಾಗಿಲ್ಲ. ಒಬಿಸಿ ಮೀಸಲು ವಿವಾದ ಭುಗಿಲೇಳುವ ಮುನ್ನ ಬಳ್ಳಾರಿ, ದಾವಣಗೆರೆ ಮೇಯರ್, ಉಪಮೇಯರ್ ಚುನಾವಣೆ ನಡೆದಿದೆ. ಉಳಿದ ಪಾಲಿಕೆಗಳ ಮೇಯರ್, ಉಪಮೇಯರ್ ಚುನಾವಣೆಗೆ ಸದ್ಯಕ್ಕೆ ಹಿಡಿದಿರುವ ಒಬಿಸಿ ಗ್ರಹಣ ಬಿಡುವಂತೆ ಕಾಣುತ್ತಿಲ್ಲ.

ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಮೀಸಲು ಪ್ರಮಾಣ ಶೇ.50 ಮೀರುವಂತಿಲ್ಲ. ಈ ಹಿಂದೆ ಮಹಾರಾಷ್ಟ್ರ ಸರ್ಕಾರ ಇದನ್ನು ಮೀರಿ ಚುನಾವಣೆ ನಡೆಸಿದ್ದನ್ನು ನ್ಯಾಯಾಲಯವು ರದ್ದುಪಡಿಸಿದೆ. ಈ ಆದೇಶದ ಹಿನ್ನೆಲೆಯಲ್ಲಿ ಒಬಿಸಿ ಮೀಸಲು ಸರ್ಕಾರಕ್ಕೆ ಕಗ್ಗಂಟಾಗಿದೆ. ಒಂದು ವೇಳೆ, ಒಬಿಸಿ ಮೀಸಲು ರದ್ದುಪಡಿಸಿ ಜಿಪಂ, ತಾಪಂ ಚುನಾವಣೆ ನಡೆಸುವುದು ಜೇನುಗೂಡಿಗೆ ಕಲ್ಲು ಹೊಡೆದಂತಾಗಲಿದೆ ಎನ್ನುವುದು ಬಿಜೆಪಿ ಸರ್ಕಾರದ ಪರಿಸ್ಥಿತಿ. ಇಂತಹ ದುಸ್ಸಾಹಸಕ್ಕೆ ಕೈಹಾಕದೆ ಮುಂಬುರುವ ವಿಧಾನಸಭಾ ಚುನಾವಣೆವರೆಗೂ ಕಾಲಹರಣ ಮಾಡುವ ಸಾಧ್ಯತೆಗಳು ದಟ್ಟವಾಗಿವೆ. ಜಿಪಂ, ತಾಪಂ ಅಲ್ಲದೆ 51 ಸ್ಥಳೀಯ ಸಂಸ್ಥೆಗಳಿಗೂ ಚುನಾವಣೆ ನಡೆಯಬೇಕಿದೆ. ಇತರ ಹಿಂದುಳಿದ ವರ್ಗಗಳ ಮೀಸಲು ಗೊಂದಲ ಇತ್ಯರ್ಥ ಬಳಿಕವೇ ಈ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕಿದೆ. ಈ ಸಂಬಂಧ ಆಯೋಗ ರಚಿಸಲಾಗಿದೆ. ಇನ್ನೂ ಮೇಯರ್, ಉಪಮೇಯರ್ ಚುನಾವಣೆ ನಡೆಯಬೇಕಿರುವ ಪಾಲಿಕೆಗೂ ಸುಪ್ರೀಂ ಆದೇಶ ಅನ್ವಯವಾಗಲಿದ್ದು ಇದರ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವ