ಕೊಳ್ಳೇಗಾಲ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ರೈತ ರವಿಕುಮಾರ್ ಟ್ರಾಕ್ಟರ್ ನಲ್ಲಿ ಎಲೆ ಕೋಸು ಮಾರಾಟ ಮಾಡುತ್ತಿರುವುದು. 
ಜಿಲ್ಲೆ

ಎಲೆಕೋಸಿಗೆ ಬೆಲೆ ಕುಸಿತ

ಕೊಳ್ಳೇಗಾಲ: ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಎಲೆ ಕೋಸು ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಂಬಲ ಬೆಲೆ ಸಿಗದ ಕಾರಣ ರೈತನೊಬ್ಬ ನೊಂದು ಸಾರ್ವಜನಿಕರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾನೆ.

ಹನೂರು ಪಟ್ಟಣದ ರವಿಕುಮಾರ್ ಕಡಿಮೆ ಬೆಲೆಗೆ ಎಲೆಕೋಸು ಮಾರಾಟ ಮಾಡಿರುವ ರೈತ. ಸುಮಾರು ಒಂದೂವರೆ ಎಕರೆ ಜಮೀನಿನಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಈತ ಎಲೆಕೋಸು ಬೆಳೆದಿದ್ದ. ಆದರೆ. ಪ್ರಸ್ತುತ ಮಾರುಕಟ್ಟೆಯಲ್ಲಿ 1ಕೆಜಿ ಎಲೆಕೋಸನ್ನು ಕೇವಲ 5. ರೂಪಾಯಿಗೆ ಕೇಳುತ್ತಿದ್ದಾರೆ. ಈ ದರಕ್ಕೆ ಮಾರಾಟ ಮಾಡಿದರೆ ಇದ್ದರಿಂದ ನನಗೆ ಬಹಳ ನಷ್ಟವಾಗಲಿದೆ. ಅದಲ್ಲದೆ ಇದೇ ದರಕ್ಕೆ ಮಾರಾಟ ಮಾಡಿದರೂ ದಲ್ಲಾಳಿಗಳಿಗೂ ಕಮಿಷನ್ ಕೊಡಬೇಕು. ಆಗ ಮತಷ್ಟೂ ನಷ್ಟವಾಗುತ್ತದೆ. ಸಾಗಣೆ ಖರ್ಚು ಹೆಚ್ಚು ಬೀಳುತ್ತದೆ. ಆದ್ದರಿಂದ ದಲ್ಲಾಳಿಗಳಿಗೆ ಕಮಿಷನ್ ಕೊಟ್ಟು ಕಡಿಮೆ ಬೆಲೆಗೆ ಮಾರಾಟ ಮಾಡುವ ಬದಲಿಗೆ ಜನರಿಗೆ ಕಡಿಮೆ ಬೆಲೆಗೆ ನೀಡುತ್ತೇನೆ ಎಂಬ ತೀರ್ಮಾನ ಮಾಡಿ ಕೊಳ್ಳೇಗಾಲ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಟ್ರಾೃಕ್ಟರ್‌ನಲ್ಲಿ ಈತ ತುಂಬಿಕೊಂಡು ಬಂದಿದ್ದ ಎಲೆಕೋಸನ್ನು ಮಾರಾಟ ಮಾಡಿದ್ದು ಗಮನ ಸೆಳೆಯಿತು.
ಒಂದು ಎಲೆಕೋಸು ಸುಮಾರು ಎರಡೂವರೆ ಕೆಜಿ ತೂಗಲಿದ್ದು, ಗ್ರಾಹಕರಿಗೆ ಕೇವಲ 10 ರೂಪಾಯಿಗೆ ಮಾರಾಟ ಮಾಡಿದ. ಅಂತೆಯೇ, ಜನರು ಸಹ ಕಡಿಮೆ ಬೆಲೆಗೆ ಸಿಗುವ ಕೋಸನ್ನು ಮುಗಿಬಿದ್ದು ಖರೀದಿಸಿದರು.

ಸರ್ಕಾರ ಬೆಲೆ ನಿಗದಿ ಮಾಡಿಲ್ಲ: ಈ ಬಗ್ಗೆ ರೈತ ರವಿ ಕುಮಾರ್ ಪ್ರತಿಕ್ರಿಯಿಸಿ, ಸರ್ಕಾರಗಳು ಜನರು ನಿತ್ಯ ಬಳಸುವ ವಸ್ತುಗಳಿಗೆ ಬೆಲೆ ಏರಿಸಿದೆ. ಆದರೆ, ರೈತ ಬೆಳೆದ ಬೆಳೆಗೆ ಮಾತ್ರ ಸೂಕ್ತ ಬೆಲೆ ನಿಗದಿ ಪಡಿಸಲಿಲ್ಲ. ಇದ್ದರಿಂದ ಬೆಳೆಗಾರರಿಗೆ ಬಹಳ ನಷ್ಟ ವಾಗುತ್ತಿದೆ ಎಂದು ರವಿಕುಮಾರ್ ಬೇಸರ ವ್ಯಕ್ತಪಡಿಸಿದರು.

ಎಲೆಕೋಸಿಗೆ ಈ ಹಿಂದೆ 1 ಕೆಜಿಗೆ 50 ರಿಂದ 60 ರೂ.ಇತ್ತು. ಆದರೆ, ಇದೀಗ 5ರೂ.ಗೆ ಕೇಳುತ್ತಿದ್ದಾರೆ. ಈ ನಡುವೆ ದಲ್ಲಾಳಿಗಳ ಕಮಿಷನ್ ಹಾವಳಿ ಬೇರೆ. ಇದರಿಂದ ಬೇಸತ್ತು ಸಂತೋಷದಿಂದ ಜನರೇ ಕಡಿಮೆ ಬೆಲೆಗೆ ತಿನ್ನಲಿ ಎಂದು ನೇರವಾಗಿ ಮಾರಾಟ ಮಾಡಿದ್ದೇನೆ. ನನಗೆ ನಷ್ಟವಾದರೂ ಪರವಾಗಿಲ್ಲ, ಜನರು ತರಕಾರಿ ತಿಂದು ಖುಷಿ ಪಡುತ್ತಾರೆ ಎಂಬ ಸಮಾಧಾನ ದೊರಕಿದೆ ಎಂದರು.