ಬಾಳೆಹೊನ್ನೂರು: ಬಾಳೆಹೊನ್ನೂರು-ಚಿಕ್ಕಮಗಳೂರು ಮಾರ್ಗದ ಎಲೆಕಲ್ಲು ಮುಖ್ಯರಸ್ತೆಯ ಮೀಸಲು ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಕಾಡಾನೆಯೊಂದು ಪ್ರತ್ಯಕ್ಷವಾಗಿದೆ.
ಬೆಳಿಗ್ಗೆ ರಸ್ತೆ ಬದಿಯ ಅರಣ್ಯ ಪ್ರದೇಶದಲ್ಲಿ ಕಾಡಾನೆ ನಿಂತುಕೊಂಡು ಆಹಾರ ಅರಸುತ್ತಿದ್ದುದನ್ನು ವಾಹನ ಚಾಲಕರು ಗಮನಿಸಿದ್ದಾರೆ. ಕೆಲ ಗಂಟೆಗಳ ಕಾಲ ರಸ್ತೆ ಬದಿಯಲ್ಲಿ ನಿಂತಿದ್ದ ಆನೆ ಬಳಿಕ ರಸ್ತೆಯ ಮತ್ತೊಂದು ಬದಿಗೆ ದಾಟಿ ತೆರಳಿದೆ. ಈ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಈ ಆನೆ ಸಂಚರಿಸುತ್ತಿದ್ದು ಸ್ಥಳೀಯರು ಭಯಭೀತರಾಗಿದ್ದಾರೆ. ಇದರೊಂದಿಗೆ ಕೊಪ್ಪ ತಾಲೂಕು ಅಡಿಗೆಬೈಲು ಗ್ರಾಮದ ತುಪ್ಪೂರು, ಸರಗಳಲೆ, ಸಿಗಸೆ ಮುಂತಾದ ಕಡೆಗಳಲ್ಲಿಯೂ ಮತ್ತೊಂದು ಕಾಡಾನೆ ಕೆಲ ದಿನಗಳಿಂದ ಒಂದೊಂದು ಗ್ರಾಮಗಳಿಗೆ ತೆರಳುತ್ತ ಕೃಷಿ ಜಮೀನಿಗೆ ನುಗ್ಗಿ ಹಾನಿ ಮಾಡುತ್ತಿದೆ. ರೈತರು ಆನೆಯನ್ನು ಬೇರೆಡೆಗೆ ಓಡಿಸುವಂತೆ ಒತ್ತಾಯಿಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ.