ಮೂಡಿಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರು ಮತ್ತು ಶಾಸಕರನ್ನು ನಿದ್ರೆ ಮಾಡಲು ಬಿಡದೆ ಕೆಲಸ ಮಾಡಿಸಿದ್ದರಿಂದ ಎರಡು ವರ್ಷದಲ್ಲಿ ರಾಜ್ಯ ಅಭಿವೃದ್ಧಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಮಂಗಳವಾರ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಎಂಬ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಬಿಜೆಪಿ ಮತ್ತು ಕಾಂಗ್ರೆಸಿನ ಹಿಂದುತ್ವದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಕಾಂಗ್ರೆಸ್ ಸರ್ವಧರ್ಮ ಸಹಿಷ್ಣುತೆ, ದೇಶದ ಸ್ವಾಭಿಮಾನ ಮತ್ತು ಪರಂಪರೆ ಬೆಳೆಸಲು ಮುಂದಾಗಿದೆ. ಬಿಜೆಪಿ ರಾಜಕಾರಣ ಮಾಡುವ ಸಲುವಾಗಿ ಹಿಂದುತ್ವದ ಹೆಸರಿನಲ್ಲಿ ದರ್ಪ, ದೌರ್ಜನ್ಯ ಮೆರೆಯುತ್ತಿದೆೆ. ರಾಜಕೀಯದಲ್ಲಿ ಪ್ರಧಾನಿ, ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರು ಎಲ್ಲರೂ ಹಿಂದುಗಳೇ ಹೆಚ್ಚಾಗಿದ್ದಾರೆ. ಹಾಗಾದರೆ ಹಿಂದುತ್ವ ಅಪಾಯದಲ್ಲಿರುವುದಾದರೂ ಹೇಗೆ? ಇದು ಬಿಜೆಪಿಯವರ ಕಪಟ ನಾಟಕದ ರಾಜಕೀಯ ಎಂದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗಡೆ ಮಾತನಾಡಿ, ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಅಂಶಗಳನ್ನು ಒಳಗೊಂಡಿರುವ ಜಾತಿ ಜನಗಣತಿ ತಯಾರಿಸುವಂತೆ ಆದೇಶ ನೀಡಿದ್ದರಿಂದ ವರದಿ ತಯಾರಿಸುವಾಗ ಸಹಜವಾಗಿ ಜಾತಿವಾರು ಜನಸಂಖ್ಯೆ ಲೆಕ್ಕ ಸಿಗುತ್ತದೆ. ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಶಿಕ್ಷಕರು ಗಣತಿ ವರದಿ ತಯಾರಿಸಿದ್ದಾರೆ. ಇದರಲ್ಲಿ ಲೋಪವಾಗಿಲ್ಲ. ವರದಿ ಜಾರಿ ಬಗ್ಗೆ ರಾಜ್ಯ ಸಚಿವ ಸಂಪುಟ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.
ಜನ್ನಾಪುರ, ಮಲ್ಲಂದೂರುಗಳಲ್ಲಿ ವಿದ್ಯುತ್ ಉಪ ಕೇಂದ್ರ ಕಾಮಗಾರಿ ನಡೆಯುತ್ತಿದೆ. ಹಾಂದಿ ಮತ್ತು ಬಾಳೆಹೊಳೆ ಗ್ರಾಮದಲ್ಲಿ ವಿದ್ಯುತ್ ಉಪ ಕೇಂದ್ರಕ್ಕೆ ಜಾಗ ಗುರುತಿಸಲಾಗಿದೆ. ಮೂಡಿಗೆರೆ ತಾಲೂಕಿಗೆ ಹಾಸನದಿಂದ ವಿದ್ಯುತ್ ಸರಬರಾಜಾಗುತ್ತಿದೆ. ನಾನು ಶಾಸಕಿಯಾದ ಎರಡು ವರ್ಷದಲ್ಲಿ ಕ್ಷೇತ್ರಕ್ಕೆ 93 ಕೋಟಿ ರೂ. ಅನುದಾನ ಬಂದಿದೆ. ಇನ್ನೂ 171 ಕೋಟಿ ರೂ. ಅನುದಾನ ಬರಬೇಕಾಗಿದೆ. ಕಾವೇರಿ ಜಲ ನಿಗಮದಿಂದ 50 ಕೋಟಿ ರೂ., ವಿಶ್ವೇಶ್ವರಯ್ಯ ಜಲ ನಿಗಮದಿಂದ 11 ಕೋಟಿ ರೂ. ಅನುದಾನ ಬಂದಿದೆ. ರಸ್ತೆಗಳ ಅಭಿವೃದ್ಧಿ ನಡೆಸಲಾಗುತ್ತಿದೆ. ತಾಲೂಕಿಗೆ 42 ಕಾಡಾನೆ ಒಂದೇ ಗುಂಪಿನಲ್ಲಿ ಬಂದಿವೆ. ಅರಣ್ಯ ಪ್ರದೇಶ ಇರುವ ಕಡೆ 72 ಕಿ.ಮೀ. ಟೆಂಟೆಕಲ್ ಐಬೆಕ್ಸ್ ಬೇಲಿ ನಿರ್ಮಾಣ ಹಂತದಲ್ಲಿದೆ. ಬೇಲೂರು ಗಡಿ ಭಾಗದಲ್ಲಿ ಮೀಸಲು ಅರಣ್ಯ ಇಲ್ಲದಿರುವುದರಿಂದ ಟೆಂಟಕಲ್ ಐಬೆಕ್ಸ್ ಬೇಲಿ ನಿರ್ಮಿಸಲು ಸಾಧ್ಯವಾಗದಿರುವುದರಿಂದ ಅಲ್ಲಿಂದ ಹೆಚ್ಚು ಕಾಡಾನೆಗಳು ತಾಲೂಕಿಗೆ ಲಗ್ಗೆಯಿಡುತ್ತಿವೆ ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದರು. ಕಳಸ ತಾಲೂಕಿನ 42 ಹಳ್ಳಿಗಳ ಜನ ಕಳೆದ ಬಾರಿ ಚುನಾವಣಾ ಬಹಿಷ್ಕಾರ ಹಾಕಿದ್ದರು. ಅವರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದೆ. ಅಲ್ಲಿ ಈಗ 3 ಕಡೆ ಸೇತುವೆ ನಿರ್ಮಿಸಲಾಗಿದೆ. ಒಂದು ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆದಿದೆ. ಒಟ್ಟು 20 ಸೇತುವೆ ನಿರ್ಮಾಣಕ್ಕೆ ತಯಾರಿ ನಡೆಸಲಾಗಿದೆ. ಕಾಂಗ್ರೆಸ್ 150 ಕಾರ್ಯಕರ್ತರನ್ನು ವಿವಿಧ ಸ್ಥಳಿಯ ಸಂಸ್ಥೆಗಳಿಗೆ ನಾಮನಿರ್ದೇಶನ ಮಾಡಲಾಗಿದೆ. ವಸತಿ ಯೋಜನೆಯ 142 ಮನೆಗಳ ಅನುದಾನ ನೀಡಲು ಬಾಕಿಯಿದೆ. ಸರ್ಕಾರ ಸದ್ಯದಲ್ಲಿ ಬಾಕಿ ಮೊತ್ತ ಬಿಡುಗಡೆ ಮಾಡಲಿದೆ. ಕುಂದೂರು, ಸಾರಗೋಡು ನಿರಾಶ್ರಿತರಿಗೆ ಜಾಗ ನೀಡಲಾಗಿದೆ. ಚೆನ್ನಡ್ಲು ಮತ್ತು ನಂದಿಪುರ ಗ್ರಾಮಸ್ಥರಿಗೆ ಹಕ್ಕುಪತ್ರ ನೀಡಲಾಗಿದೆ. ನಿವೇಶನ ರಹಿತರಿಗೆ 100 ಎಕರೆ ಜಾಗದಲ್ಲಿ ನಿವೇಶನ ನೀಡಲು ತಯಾರಿ ನಡೆದಿದೆ ಎಂದು ಮಾಹಿತಿ ನೀಡಿದರು.
ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಮುಖಂಡರಾದ ನಿಖಿಲ್ ರಾಜ್ ಮೌರ್ಯ, ಸಿ.ಕೆ.ಇಬ್ರಾಹಿಂ, ಅಕ್ರಮ್ ಹಾಜಿ, ಬಿ.ಎಸ್.ಜಯರಾಮ್, ಎಚ್.ಜಿ.ಸುರೇಂದ್ರ, ಮುದಬ್ಬೀರ್, ಶ್ರೇಣಿಕ್ ಇತರರಿದ್ದರು.