ಜಿಲ್ಲೆ

ಎರಡೇ ದಿನದಲ್ಲಿ 39 ಪಾಸಿಟಿವ್

ಬೀದರ್: ಎರಡನೇ ಅಲೆಯ ಆತಂಕದ ನಡುವೆ ಗಡಿ ಜಿಲ್ಲೆಯಲ್ಲಿ ಕರೊನಾ ಪ್ರಕರಣ ಹೆಚ್ಚುತ್ತಿವೆ. ಕಳೆದೆರಡು ದಿನಗಳಲ್ಲೇ 39 ಹೊಸ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಜಿಲ್ಲೆಯ ಜನರಲ್ಲಿ ಮತ್ತೆ ಮಹಾಮಾರಿ ಭೀತಿ ಹುಟ್ಟಿಸುವಂತೆ ಮಾಡಿದೆ.

ನೆರೆಯ ಮಹಾರಾಷ್ಟ್ರದ ವಿವಿಧೆಡೆ ಕರೊನಾ ಎರಡನೇ ಅಲೆಯ ಅಪಾಯ ಎದುರಾಗಿದೆ. ಹೀಗಾಗಿ ಗಡಿಗೆ ಹೊಂದಿಕೊಂಡ ಬೀದರ್ ಜಿಲ್ಲೆಯಲ್ಲೂ ಇದು ತಳಮಳಕ್ಕೆ ಕಾರಣವಾಗಿದೆ. ಇಂಥದರಲ್ಲಿ ಕೆಲ ದಿನಗಳಿಂದ ದಿನೇ ದಿನೆ ಪಾಸಿಟಿವ್ ಸಂಖ್ಯೆ ವೃದ್ಧಿಯಾಗುತ್ತಿವೆ. ಸೋಮವಾರ 17 ಪಾಸಿಟಿವ್ ಪತ್ತೆಯಾದರೆ, ಮಂಗಳವಾರ ಮತ್ತೆ 22 ಹೊಸ ಕೇಸ್ ವರದಿಯಾಗಿವೆ. ಮೂರು ತಿಂಗಳ ಬಳಿಕ ಇದೇ ಮೊದಲ ಬಾರಿ ಪಾಸಿಟಿವ್ ಸಂಖ್ಯೆ 20ರ ಗಡಿ ದಾಟಿದ್ದು, ಸಹಜವೇ ಜನರ ಹಾಗೂ ಆಡಳಿತದ ಚಿಂತೆ ಹೆಚ್ಚಿಸಿದೆ.

ಕಳೆದೊಂದು ವಾರದಿಂದ ಇಲ್ಲಿ ಕರೊನಾ ಪ್ರಕರಣ ಏರುಗತಿ ಕಾಣುತ್ತಿದೆ. ಒಂದು ವಾರದಲ್ಲಿ ಜಿಲ್ಲೆಯಲ್ಲಿ ಒಟ್ಟು 69 ಪಾಸಿಟಿವ್ ವರದಿಯಾಗಿವೆ. ಫೆ. 24ಕ್ಕೆ 6, 25ಕ್ಕೆ 5, 26ರಂದು 9, 27ಕ್ಕೆ 10 ಪ್ರಕರಣ ವರದಿಯಾಗಿವೆ. ಫೆ. 28ರಂದು ಒಂದೂ ಪ್ರಕರಣ ಬಂದಿಲ್ಲ. ಇಲ್ಲಿನ ಬ್ರಿಮ್ಸ್ ನಲ್ಲಿ ಮಾ.1ರಂದು ಕೈಗೊಂಡ 175 ಜನರ ಪರೀಕ್ಷೆಯಲ್ಲಿ 17 ಪಾಸಿಟಿವ್ ಬಂದಿವೆ. ಮಾ.2ರಂದು 925 ಟೆಸ್ಟ್‌ನಲ್ಲಿ 22 ಜನರಿಗೆ ಸೋಂಕು ದೃಢಪಟ್ಟಿದೆ. ಪ್ರಕರಣ ಹೆಚ್ಚಳವಾಗುತ್ತಿದ್ದರೂ ಜಿಲ್ಲೆಯ ಬಹುತೇಕ ಜನರು ಕೋವಿಡ್ ನಿಯಮ ಪಾಲನೆಗೆ ವಿದಾಯ ಹೇಳಿರುವುದು ಬರುವ ದಿನದ ಆಪತ್ತಿನ ಮುನ್ಸೂಚನೆ ಆದರೂ ಅಚ್ಚರಿಯಿಲ್ಲ ಎನ್ನಬಹುದಾಗಿದೆ.

ಮಹಾರಾಷ್ಟ್ರದ ಕೆಲ ಜಿಲ್ಲೆಗಳಲ್ಲಿ ಕರೊನಾ ಎರಡನೇ ಅಲೆ ತೀವ್ರವಾಗಬಹುದು. ಅದರ ಪರಿಣಾಮ ಗಡಿ ಭಾಗದ ಮೇಲೂ ಆಗಬಹುದು ಎಂಬ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಸಾಕಷ್ಟು ಕಟ್ಟೆಚ್ಚರ ವಹಿಸಲಾಗಿದೆೆ. ಮಹಾರಾಷ್ಟ್ರದಿಂದ ಬೀದರ್ ಗೆ ಸೇರುವ ವಿವಿಧ ಮಾರ್ಗಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಆರಂಭಿಸಿದ್ದು, ಜಿಲ್ಲೆಗೆ ಪ್ರವೇಶಿಸುವ ಪ್ರಯಾಣಿಕರ ಹಾಗೂ ಎಲ್ಲ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುವವರಿದ್ದರೆ 72 ಗಂಟೆ ಹಿಂದಿನ ಕರೊನಾ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯಗೊಳಿಸಲಾಗಿದೆ.

ಲಸಿಕಾ ಕೇಂದ್ರ ಉದ್ಘಾಟನೆ
ಬೀದರ್ ನ ಹಾರೂರಗೇರಿಯಲ್ಲಿರುವ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯಲ್ಲಿ ಮಂಗಳವಾರ ಕೋವಿಡ್ ಲಸಿಕಾ ಕೇಂದ್ರ ಉದ್ಘಾಟಿಸಿದ ಬಳಿಕ ಸಿದ್ಧಾರೂಢ ಮಠದ ಡಾ ಶ್ರೀ ಶಿವಕುಮಾರ ಸ್ವಾಮೀಜಿ ಮೊದಲ ಡೋಸ್ ಲಸಿಕೆ ಪಡೆದರು. ಆಸ್ಪತ್ರೆ ನಿರ್ದೇಶಕ ಆಕಾಶ ನಾಗಮಾರಪಳ್ಳಿ, ಸಿಇಒ ಎನ್.ಕೃಷ್ಣಾರೆಡ್ಡಿ, ಡಾ.ಮಲ್ಲಿಕಾರ್ಜುನ ಸ್ವಾಮಿ, ಡಾ.ದೀಪಕ ಚೋಕಡಾ ಇದ್ದರು.


ದತ್ತಗಿರಿ ಶಾಲೆಗೆ ರಜೆ
ಪ್ರಥಮ ದರ್ಜೆ ಸಹಾಯಕ ಹುದ್ದೆ ಸಂಬಂಧ ಭಾನುವಾರ ಬೀದರ್ ನ ದತ್ತಗಿರಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಕರೊನಾ ಪಾಸಿಟಿವ್ ಬಂದಿರುವುದು ಆತಂಕ ಮೂಡಿಸಿದೆ. ಪರೀಕ್ಷೆಗೆ ನಿಯೋಜಿತ ಸಿಬ್ಬಂದಿಗೆ ಪಾಸಿಟಿವ್ ಬಂದ ಕಾರಣ ಅಂದು ಇವರ ಸಂಪರ್ಕಕ್ಕೆ ಬಂದವರ ಶೋಧ ಆರಂಭಿಸಲಾಗಿದೆ. ಶಾಲೆಯನ್ನು ಸ್ಯಾನಿಟೈಸ್ ಮಾಡಲಾಗಿದ್ದು , ಮುಂಜಾಗ್ರತಾ ಕ್ರಮವಾಗಿ ಮೂರು ದಿನ ಶಾಲೆಗೆ ರಜೆ ನೀಡಲಾಗಿದೆ.