ಜಿಲ್ಲೆ

ಎರಡು ವರ್ಷದ ಗೌರವ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಕಟ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಕರ್ನಾಟಕ ಬಯಲಾಟ ಅಕಾಡೆಮಿಯ 2023-24 ಹಾಗೂ 2024-25ನೇ ಸಾಲಿನ ಬಯಲಾಟ ಗೌರವ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನು ಬಯಲಾಟ ಕಲಾ ಪ್ರಕಾರಗಳಿಗೆ ನೀಡಿರುವ ಅಮೂಲ್ಯವಾದ ಹಾಗೂ ಅನನ್ಯವಾದ ಸೇವೆಯನ್ನು ಪರಿಗಣಿಸಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಬಯಲಾಟ ಅಕಾಡೆಮಿಯ ಅಧ್ಯಕ್ಷ ಪ್ರೊ.ಕೆ.ಆರ್.ದುರ್ಗಾದಾಸ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಪ್ರತಿ ಸಾಲಿಗೆ 5 ಜನರಿಗೆ ಗೌರವ ಪ್ರಶಸ್ತಿ ಹಾಗೂ 10 ಜನರಿಗೆ ವಾರ್ಷಿಕ ಪ್ರಶಸ್ತಿ ನೀಡಲಾಗುತ್ತಿದೆ. ಗೌರವ ಪ್ರಶಸ್ತಿ ಪುರಷ್ಕøತರಿಗೆ ತಲಾ 50 ಸಾವಿರ ರೂ, ನಗದು ಹಾಗೂ ಪ್ರಶಸ್ತಿ ಫಲಕ, ವಾರ್ಷಿಕ ಪ್ರಶಸ್ತಿ ವಿಜೇತರಿಗೆ ತಲಾ 25 ಸಾವಿರ ರೂ. ನಗರದು ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ. 2023 ಮತ್ತು 2024 ನೇ ಸಾಲಿನ ಪ್ರಶಸ್ತಿಗಳ ಜೊತೆಗೆ ಕಳೆದ 2 ವರ್ಷಗಳ ಪ್ರಶಸ್ತಿಗಳಿಗೆ ಆಯ್ಕೆಯಾದವರನ್ನು ಸೇರಿ ಒಟ್ಟು 4 ವರ್ಷದ ಪ್ರಶಸ್ತಿಗಳನ್ನು ಡಿಸೆಂಬರ ಕೊನೆಯ ವಾರದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಹಸ್ತಪ್ರತಿ ಸಂಗ್ರಹಕ್ಕೆ ಸಂಶೋಧಕರ ನೇಮಕ

ಪ್ರಸಕ್ತ ಸಾಲಿಗೆ ಕಾರ್ಯಕ್ರಮಗಳ ಆಯೋಜನೆಗೆ ಕ್ರೀಯಾ ಯೋಜನೆ ಸಿದ್ದಪಡಿಸಲಾಗಿದ್ದು, ಬಯಲಾಟ ಕಲಾವಿದರ ಮಾಹಿತಿ ಹಾಗೂ ಹಸ್ತಪ್ರತಿ ಸಂಗ್ರಹ, ಪ್ರಕಟಣೆಗಾಗಿ 11 ಜನ ಸಂಶೋಧನಾ ಸಹಾಯಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಬೆಳಗಾವಿ ಮತ್ತು ಕಲ್ಬುರ್ಗಿ ವಿಭಾಗದ ಜಿಲ್ಲೆಗಳನ್ನು ಕೇಂದ್ರವಾಗಿರಿಸಿಕೊಂಡು ಕಾರ್ಯಾರಂಭ ಮಾಡಲಾಗಿದೆ. ವಿವಿಧ ಜಿಲ್ಲೆ ತಾಲೂಕು, ಹೋಬಳಿ ಮಟ್ಟದಲ್ಲಿ ಬಯಲಾಟ, ಸಣ್ಣಾಟ, ಶ್ರೀಕೃಷ್ಣ ಪಾರಿಜಾತ, ತೊದಲ ಗೊಂಬೆ ಕುರಿತಂತೆ ವಿಚಾರ ಸಂಕಿರಣ, ಹಾಡುಗಾರಿಕೆ ಮತ್ತು ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಈಗಾಗಲೇ ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಸೆಪ್ಟೆಂಬರ ಮಾಹೆಯಲ್ಲಿ ಬೆಳಗಾವಿ ಜಿಲ್ಲೆಯ ಸಣ್ಣಾಟ ಸಮ್ಮೇಳನ, ಅಕ್ಟೋಬರ ಮಾಹೆಯಲ್ಲಿ ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ಪಾರಿಜಾತ ಸಮ್ಮೇಳನ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಗೊಂಬೆಯಾಟ, ಅಕ್ಟೋಬರ 29 ಮತ್ತು 30 ರಂದು ಕಲಬುರಗಿ ಜಿಲ್ಲೆಯ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಬಯಲಾಟ ಪರಂಪರೆ ಕುರಿತು ಕಾರ್ಯಕ್ರಮ ನಡೆಸಲಾಗಿದೆ. ಈ ಕಾರ್ಯಕ್ರಮದಲ್ಲಿ 8 ರಿಂದ 10 ಕಲಾತಂಡಗಳು ಭಾಗವಹಿಸಿ ಪ್ರದರ್ಶನ ನೀಡಿವೆ ಎಂದರು.

ಡಿಸೆಂಬರ ಮತ್ತು ಜನವರಿಯಲ್ಲಿ ಬಳ್ಳಾರಿ, ಚಿತ್ರದುರ್ಗ, ತುಮಕೂರು ಮತ್ತು ಮೈಸೂರಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಗಡಿಭಾಗಗಳಲ್ಲಿ ಭಾಷಾ ಸೌಹಾರ್ದತೆ ಮತ್ತು ಸಂಸ್ಕøತಿಕ ಸಾಮರಸ್ಯವನ್ನು ಪ್ರತಿನಿಧಿಸುವ ವಿಚಾರ ಸಂಕಿರಣ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದೆ. ಜನವರಿ ಮಾಹೆಯಲ್ಲಿ ಬಾಗಲಕೋಟೆಯಲ್ಲಿ ಚಿಂತನ ಮಂಥನ ಶಿಬಿರವನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಯಲಾಟ ಅಕಾಡೆಮಿಯ ಸದಸ್ಯರಾದ ಭೀಮಪ್ಪ ಹುದ್ದಾರ, ಲಕ್ಷ್ಮಣ ದೇಸಾಯಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಉಪಸ್ಥಿತರಿದ್ದರು.