ಕಲಬುರಗಿ: ತೆಲಂಗಾಣದ ಕಾಂಗ್ರೆಸ್ ಸರ್ಕಾರ ಹೆಕ್ಟೇರ್‌ಗೆ ೧೫ ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತಿದ್ದು, ರೈತರ ಎರಡು ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಿದೆ. ಅದೇ ಮಾದರಿ ರಾಜ್ಯ ಸರ್ಕಾರವೂ ಜಾರಿ ಮಾಡಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ದಕ್ಷಿಣ ಭಾರತ ರಾಜ್ಯಗಳ ಸಂಚಾಲಕ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರ ಶಾಂತಕುಮಾರ ಆಗ್ರಹಿಸಿದರು.
ರೈತಪರ ಎನ್ನುವ ಸಿದ್ದರಾಮಯ್ಯ ರಾಜ್ಯದಲ್ಲಿ ಬರಗಾಲವಿದ್ದರೂ ಕಿಸಾನ್ ಸಮ್ಮಾನ್ ನಾಲ್ಕು ಸಾವಿರ ರೂ. ಸ್ಥಗಿತಗೊಳಿಸಿದ್ದಾರೆ. ಹಾಲು ಉತ್ಪಾದಕರಿಗೆ ನೀಡುವ ಐದು ರೂ. ಪ್ರೋತ್ಸಾಹಧನ ಎಂಟು ತಿಂಗಳಿAದ ನೀಡಿಲ್ಲ. ಆದ್ದರಿಂದಲೇ ರೈತರು ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾರೆ. ಸರ್ಕಾರ ಕೂಡಲೇ ಸಾಲ ಮನ್ನಾ ಮಾಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಸಿದ್ದರಾಮಯ್ಯ ರೈತರನ್ನು ಲಘುವಾಗಿ ಸ್ವೀಕರಿಸಬಾರದು. ಪ್ರೋತ್ಸಾಹಧನದ ಕುರಿತು ಸಮಿತಿ ಮಾಡಿ ಚಿಂತನೆ ಮಾಡಬೇಕು. ಕೇಂದ್ರ ಸರ್ಕಾರ ೧೪ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದರೆ ಲಾಭವಿಲ್ಲ. ರೈತರು ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ. ಒಡಿಸಾ ಮತ್ತು ಛತ್ತೀಸಘಡ್‌ದಲ್ಲಿ ಭತ್ತ ಕ್ವಿಂಟಾಲ್‌ಗೆ ೩೧೦೦ ರೂ. ಬೆಂಬಲ ಬೆಲೆ ಘೋಷಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ೨೩೨೦ ನಿಗದಿ ಮಾಡಿರುವುದು ರೈತರಿಗೆ ಅನುಕೂಲವಿಲ್ಲ ಎಂದರು.
೬೦೦ ಕೋಟಿ ರೂ. ಕಬ್ಬಿನ ಬಾಕಿ: ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ೧೯೬ ಕೋಟಿ ರೂ. ಬಾಕಿ ಉಳಿಸಿಕೊಂಡಿವೆ ಎಂದು ಸರ್ಕಾರಕ್ಕೆ ತಿಳಿಸಿವೆ. ಆದರೆ ಸುಮಾರು ೬೦೦ ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದು, ಸುಳ್ಳು ಹೇಳಿವೆ. ಕೂಡಲೇ ಬಾಕಿ ಹಣಕ್ಕೆ ಶೇ.೧೫ ಬಡ್ಡಿ ಸೇರಿಸಿ ನೀಡಬೇಕು. ಕಬ್ಬು ನುರಿಸುವ ಕಂಪನಿ, ರೈತರ ಮಧ್ಯೆ ದ್ವಿಪಕ್ಷೀಯ ಒಪ್ಪಂದಕ್ಕೆ ಅಧಿಕಾರಿಗಳು ಸಾಥ್ ನೀಡಬೇಕು. ಜಿಲ್ಲಾಧಿಕಾರಿ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಮಧ್ಯೆ ನಿಯಂತ್ರಣ ಮಾಡಬೇಕು ಎಂದು ಹೇಳಿದರು.
ರಾಜ್ಯ ಉಪಾಧ್ಯಕ್ಷ ಬಸವರಾಜ ಪಾಟೀಲ್, ಜಿಲ್ಲಾಧ್ಯಕ್ಷ ರಮೇಶ ಹೂಗಾರ, ಜಿಲ್ಲಾ ಕಾರ್ಯದರ್ಶಿ ಧರ್ಮರಾಜ ಸಾಹು, ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಹಳ್ಳಿ ದೇವರಾಜ, ನಾಗೇಂದ್ರರಾವ ದೇಶಮುಖ, ಶಾಂತವೀರಪ್ಪ ದಸ್ತಾಪುರ ಇತರರಿದ್ದರು.