ಚಿಕ್ಕಮಗಳೂರು ಹೊರವಲಯದ ಅಲ್ಲಂಪುರ ಗ್ರಾಮದ ಕಾಫಿ ತೋಟದಲ್ಲಿ ಸಿಕ್ಕಿರುವ ಎರಡು ದಿನದ ಮಗು. 
ಜಿಲ್ಲೆ

ಎರಡು ದಿನದ ಹಸುಗೂಸನ್ನು ಕಾಫಿತೋಟದಲ್ಲಿ ಬಿಟ್ಟು ಹೋದ ತಾಯಿ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಎರಡು ದಿನದ ಮಗುವನ್ನ ಹೆತ್ತ ತಾಯಿಯೇ ಕಾಫಿ ತೋಟದಲ್ಲಿ ಬಿಟ್ಟು ಹೋಗಿರುವ ಘಟನೆ ಚಿಕ್ಕಗಳೂರು ತಾಲೂಕಿನ ಅಲ್ಲಂಪುರ ಗ್ರಾಮದಲ್ಲಿ ನಡೆದಿದೆ.

ಚಂದ್ರಮ್ಮ ಎಂಬುವರ ಮನೆಯ ಪಕ್ಕದಲ್ಲಿರುವ ಕಾಫಿ ತೋಟದಲ್ಲಿ ಹುಟ್ಟಿದ ಎರಡೇ ದಿನಕ್ಕೆ ಪುಟ್ಟ ಹಸುಕಂದಮ್ಮನನ್ನು ಹೆತ್ತ ತಾಯಿಯೇ ಬಿಟ್ಟು ಹೋಗಿದ್ದಾಳೆ. ಗುರುವಾರ ಬೆಳಗ್ಗಿನ ಜಾವ ೬ಗಂಟೆಯ ಸಮಯದಲ್ಲಿ ಮಗು ಅಳುವ ಸದ್ದು ಕೇಳಿಸಿದೆ. ಸ್ವಲ್ಪ ಸಮಯ ಸುಮ್ಮನಾದ ತೋಟದ ಪಕ್ಕದ ಮನೆಯ ಚಂದ್ರಮ್ಮ ಯಾರದೋ ಮಗು ಅಳ್ಳುತ್ತಿರಬೇಕು ಎಂದು ಸುಮ್ಮನಾಗಿದ್ದಾರೆ. ಗಂಟೆಗಳು ಕಳೆದರೂ ಕೂಡ ಮಗುವಿನ ಅಳು ನಿಲ್ಲದಿದ್ದಾಗ ತನ್ನ ಮಗಳನ್ನು ಕರೆದುಕೊಂಡು ಬಂದು ನೋಡಿದಾಗ ಮೈ ಮೇಲೆ ಬಟ್ಟೆಯೇ ಇಲ್ಲದೆ ತೋಟದ ಒಂದು ಮೂಲೆಯಲ್ಲಿ ಮಗು ಬಿಟ್ಟುಹೋಗಿರುವುದು ತಿಳಿದಿದೆ.

ಕೂಡಲೇ ಚಂದ್ರಮ್ಮ ಅವರು ಮಗುವನ್ನು ತಮ್ಮ ಮನೆಗೆ ಕರೆತಂದು ಮಗುವಿಗೆ ಹಾಲು ಕುಡಿಸಿ ಆರೈಕೆ ಮಾಡಿದ್ದಾರೆ. ಬಳಿಕ ಗ್ರಾಮದ ಆಯಾಗೆ ವಿಷಯ ತಿಳಿಸಿ ಸ್ಥಳಕ್ಕೆ ಡಾಕ್ಟರನ್ನು ಕರೆಸಿ, ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಧಿಕಾರಿಗಳು ಮಗುವನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದಾರೆ.