ಕೊಳ್ಳೇಗಾಲ ಪಟ್ಟಣದ ಮುಡಿಗುಂಡ ಗ್ರಾಮದಲ್ಲಿ ಶನಿವಾರ ಆಯೋಜಿಸಲಾಗಿದ್ದ ಎರಡು ದಿನ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಚಾಲನೆ ನೀಡಿದರು. ಪುಷ್ಪಲತಾ ಶಾಂತರಾಜು, ರಮ್ಯ ಮಹೇಶ್, ಲೋಕೇಶ್, ಜಾಕಿ ಸುರೇಶ್, ಮೂರ್ತಿ ಇತರರು ಇದ್ದಾರೆ . 
ಜಿಲ್ಲೆ

ಎರಡು ದಿನದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿ

ಕೊಳ್ಳೇಗಾಲ: ಪಟ್ಟಣದ ಮುಡಿಗುಂಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮುಡಿಗುಂಡ ಬಾಯ್ಸ ವತಿಯಿಂದ ವಾಲಿಬಾಲ್ ಕ್ರೀಡಾ ಪಟು ದಿ.ಲಿಂಗರಾಜು (ಪಾಪು) ಸ್ಮರಣಾರ್ಥ 2023-24ರ ಸಾಲಿನ ಎರಡು ದಿನದ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಶನಿವಾರ ಆಯೋಜಿಸಲಾಗಿತ್ತು.

ಈ ವೇಳೆ ಕ್ರೀಡಾಪಟುಗಳನ್ನು ಅಭಿನಂದಿಸಿದ ಬಳಿಕ ವಾಲಿಬಾಲ್ ಪಂದ್ಯಾವಳಿಗೆ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಚಾಲನೆ ನೀಡಿ ಮಾತನಾಡಿ, ವಾಲಿಬಾಲ್ ಪಂದ್ಯವು ಬಹಳ ವಿಶಿಷ್ಟವಾದ ಪಂದ್ಯ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾ ಪ್ರೇಮಿಗಳು ಎಲ್ಲರೂ ಇಷ್ಟ ಪಡುವ ಆಟವಾಗಿದ್ದು, ಮುಡಿಗುಂಡ ಗ್ರಾಮದ ಯುವಕರು ಈ ಪಂದ್ಯಾವಳಿಯನ್ನು ಆಯೋಜಿಸಿರುವುದು ಉತ್ತಮವಾದ ಕೆಲಸವಾಗಿದೆ ಎಂದರು.

ಯುವ ಜನತೆ ವಾಲಿಬಾಲ್ ಸೇರಿದಂತೆ ಇನ್ನಿತರ ಯಾವುದೇ ಕ್ರೀಡೆಗಳ ಅಭ್ಯಾಸಗಳಿಂದ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಬಹುದು. ಇನ್ನು ವಿಶೇಷವಾಗಿ ವಿವಿಧ ಜಿಲ್ಲೆಗಳಿಂದ ಕ್ರೀಡಾಪಟುಗಳು ಆಗಮಿಸಿ ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದು, ಕಿರಿಯ ಕ್ರೀಡಾ ಪಟುಗಳಿಗೆ ಪ್ರೇರಣೆಯಾಗಲಿದೆ ಎಂದರು.

ಮುಖಂಡ ಶಾಂತರಾಜು ಮಾತನಾಡಿ, ಆಟದಲ್ಲಿ ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖವಿದ್ದಂತೆ ಸೋಲಾಯಿತು ಎಂದು ಕುಗ್ಗಬೇಡಿ, ಗೆದ್ದೆವು ಎಂದು ಹಿಗ್ಗಬೇಡಿ. ಗೆದ್ದವರು ಮತಷ್ಟು ಪ್ರಯತ್ನ, ದೊಡ್ಡ ಮಟ್ಟದ ಸಾಧನೆ ಮಾಡಬೇಕು. ಸೋತವರು ನಿರಂತರ ಶ್ರಮವಹಿಸಿ ಗೆಲುವು ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.

ಜ.7ಹಾಗೂ 8 ರಂದು ಎರಡು ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಯಲ್ಲಿ ಬೆಂಗಳೂರು, ಹಾಸನ, ಹುಣಸೂರು, ತುಮಕೂರು, ಬೆಳಕವಾಡಿ, ಮೈಸೂರು ವಿವಿಧ ಭಾಗಗಳಿಂದ 15 ತಂಡಗಳು ಭಾಗವಹಿಸಲಿವೆ. ವಿಜೇತರಾದವರಿಗೆ ಪ್ರಥಮ ಬಹುಮಾನ 30 ಸಾವಿರ ರೂ. ನಗದು ಜತೆಗೆ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ 20 ಸಾವಿರ ರೂ. ನಗದು ಟ್ರೋಫಿ, ತೃತೀಯ ಬಹುಮಾನ 10 ಸಾವಿರ ರೂ. ನಗದು ಹಾಗೂ ಟ್ರೋಫಿ ನೀಡಲಾಗುವುದು ಎಂದರು.

ನಗರಸಭೆ ಸದಸ್ಯೆ ಪುಷ್ಪಲತಾ ಶಾಂತರಾಜು, ರಮ್ಯ ಮಹೇಶ್, ಮಾಜಿ ನಗರಸಭಾ ಅಧ್ಯಕ್ಷ ರಮೇಶ್, ಬಿಜೆಪಿ ಯುವ ಮೊರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎನ್.ಲೋಕೇಶ್, ಮುಡಿಗುಂಡ ಗ್ರಾಮದ ಗೌಡರಾದ ಭೀಮಪ್ಪ, ಮುಖಂಡರಾದ ಜಾಕಿ ಸುರೇಶ್, ಕೆ.ಕೆ.ಮೂರ್ತಿ, ಶಾಂತರಾಜು, ಆಯೋಜಕರಾದ ಸತೀಶ್, ಪ್ರತಾಪ್ ಮತ್ತಿತರಿದ್ದರು.