ಕಾರವಾರ/ಭಟ್ಕಳ: ಭಟ್ಕಳ ಕರೊನಾ ಸೋಂಕಿನ ಸರಣಿ ಮುಂದುವರಿದಿದೆ. ಶುಕ್ರವಾರ 12 ಜನರಲ್ಲಿ ಕೋವಿಡ್-19 ರೋಗ ಖಚಿತವಾಗಿತ್ತು. ಶನಿವಾರ ಮತ್ತೆ 8 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಸೋಂಕಿತರ ಸಂಪರ್ಕಕ್ಕೆ ಬಂದ ಇನ್ನೂ 30 ಜನರ ಗಂಟಲ ದ್ರವದ ಮಾದರಿಯ ಪ್ರಯೋಗಾಲಯ ವರದಿ ಬರುವುದು ಬಾಕಿ ಇದೆ. ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದ ಕೆಲವರ ಸ್ವ್ಯಾಬ್ ಸಂಗ್ರಹಿಸುವ ಕಾರ್ಯವೂ ನಡೆದಿದೆ. ಹಾಗಾಗಿ ಸೋಂಕಿನ ಪ್ರಕರಣಗಳು ಇನ್ನಷ್ಟು ಹೆಚ್ಚುವ ಆತಂಕ ಎದುರಾಗಿದೆ.
ಒಟ್ಟಾರೆ ಉತ್ತರ ಕನ್ನಡದ ಕರೊನಾ ಸೋಂಕಿತರ ಸಂಖ್ಯೆ 32ಕ್ಕೆ ಏರಿದ್ದು. ಇದರಲ್ಲಿ 11 ಜನ ಗುಣಮುಖರಾಗಿದ್ದಾರೆ. ಸೋಂಕಿತರೆಲ್ಲರೂ ಭಟ್ಕಳ ಪಟ್ಟಣದವರೇ ಆಗಿದ್ದಾರೆ. ಈ ಪಟ್ಟಣದ ಮದೀನಾ ಕಾಲನಿಯನ್ನು ಈಗಲೇ ಸೀಲ್ಡೌನ್ ಮಾಡಲಾಗಿದೆ. ಸಣ್ಣ ಪುಟ್ಟ ರಸ್ತೆಗಳನ್ನೂ ಬಂದ್ ಮಾಡಲಾಗಿದೆ. ಹೋಗಲು, ಬರಲು ಒಂದೇ ಗೇಟ್ ತೆರೆಯಲಾಗಿದೆ. ಶನಿವಾರ ಸುಲ್ತಾನ್ ಸ್ಟ್ರೀಟ್ ಪ್ರದೇಶದಲ್ಲೂ ರೋಗ ಖಚಿತವಾಗಿದ್ದು, ಅದನ್ನೂ ಸೀಲ್ಡೌನ್ ಮಾಡಲಾಗುವುದು ಎಂದು ಎಸ್ಪಿ ಶಿವಪ್ರಕಾಶ ದೇವರಾಜು ತಿಳಿಸಿದ್ದಾರೆ.
ಯಾರ್ಯಾರಿಗೆ ಸೋಂಕು?: ಮೇ 5 ರಂದು ಸೋಂಕು ಕಾಣಿಸಿಕೊಂಡ 18 ವರ್ಷ ಯುವತಿ (ಪಿ-659 ) ಹತ್ತಿರದ ಏಳು ಸಂಬಂಧಿಕರಲ್ಲಿ ಶನಿವಾರ ರೋಗ ಖಚಿತವಾಗಿದೆ. ಇನ್ನು ಆಕೆಯ ಆಪ್ತ ಸ್ನೇಹಿತೆ (ಪಿ.578) ತಂದೆಗೂ ರೋಗ ಇರುವುದು ಕಂಡುಬಂದಿದೆ. ಶನಿವಾರ ರೋಗ ಕಂಡುಬಂದ 8 ಜನರಲ್ಲಿ ನಾಲ್ವರು ಮಹಿಳೆಯರು, ಇಬ್ಬರು ವೃದ್ಧರು, ಇಬ್ಬರು ಮಕ್ಕಳು ಸೇರಿದ್ದಾರೆ. ಸೋಂಕಿತರ ಮನೆಗೆ ಎಸಿ ರಿಪೇರಿ ಮಾಡುವ ವ್ಯಕ್ತಿಯೊಬ್ಬ ಹಾಗೂ ಆಟೋ ಚಾಲಕನೊಬ್ಬ ತೆರಳಿದ್ದ ಎನ್ನಲಾಗಿದೆ. ಅವರನ್ನು ಹಾಗೂ ಅವರ ಸಂಪರ್ಕಕ್ಕೆ ಬಂದವರನ್ನೂ ಗುರುತಿಸಿ ಕ್ವಾರಂಟೈನ್ ಮಾಡುವ ಕಾರ್ಯ ನಡೆದಿದೆ.
ಸೋಂಕಿತರನ್ನು ಕಾರವಾರಕ್ಕೆ ತರಲು ವಿರೋಧ: ಭಟ್ಕಳದ ಕರೊನಾ ಸೋಂಕಿತರನ್ನು ಕಾರವಾರಕ್ಕೆ ತಂದು ಇಲ್ಲಿನ ಕ್ರಿಮ್್ಸ ಕರೊನಾ ವಾರ್ಡ್ನಲ್ಲಿ ಚಿಕಿತ್ಸೆ ನೀಡುತ್ತಿರುವುದಕ್ಕೆ ಸ್ಥಳೀಯರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಮಾಜಿ ಶಾಸಕ ಸತೀಶ ಸೈಲ್, ಜನಶಕ್ತಿ ವೇದಿಕೆಯ ಮಾಧವ ನಾಯ್ಕ, ವಕೀಲ ಕೆ.ಆರ್.ದೇಸಾಯಿ ಶನಿವಾರ ಜಂಟಿ ಸುದ್ದಿಗೋಷ್ಠಿ ನಡೆಸಿ, ‘ಸೋಂಕಿತರನ್ನು 160 ಕಿಮೀ ದೂರ ಸಾಗಿಸುವುದು ಅತ್ಯಂತ ಅಪಾಯದ ಸಂಗತಿ. ನಡುವೆ ಸಮಸ್ಯೆಯಾದರೆ ಹೊನ್ನಾವರ, ಕುಮಟಾ, ಅಂಕೋಲಾ ಎಲ್ಲ ಪಟ್ಟಣಗಳಿಗೂ ರೋಗ ಹರಡುವ ಅಪಾಯವಿದೆ. ಆಸ್ಪತ್ರೆಯ 5 ಕಿಮೀ ಪ್ರದೇಶವನ್ನು ಬಫರ್ ಜೋನ್ ಎಂದು ಗುರುತಿಸಬೇಕಾಗುತ್ತದೆ. ಇದರಿಂದ ಸಣ್ಣ ಪಟ್ಟಣ ಕಾರವಾರ ಸಂಪೂರ್ಣ ಲಾಕ್ಡೌನ್ ಆಗುವ ಆತಂಕವಿದೆ. ಕರೊನಾಕ್ಕೆ ಸಾಮಾನ್ಯ ಚಿಕಿತ್ಸೆ ಸಾಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ವಿಶೇಷ ತಜ್ಞರ ಅವಶ್ಯಕತೆ ಇಲ್ಲದ ಕಾರಣ ಭಟ್ಕಳದಲ್ಲಿಯೇ ಚಿಕಿತ್ಸೆ ಕೊಡುವ ಪ್ರಯತ್ನ ಮಾಡಬೇಕು’ ಎಂದು ಒತ್ತಾಯಿಸಿದರು.
ಮನವಿ: ನಗರಸಭೆ ಹಾಲಿ ಹಾಗೂ ಮಾಜಿ ಸದಸ್ಯರು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಅವರನ್ನು ಭೇಟಿಯಾಗಿ, ಸೋಂಕಿತರನ್ನು ಕಾರವಾರ ಕ್ರಿಮ್್ಸ ಕರೊನಾ ವಾರ್ಡ್ಗೆ ತರದಂತೆ ಮನವಿ ಮಾಡಿದರು. ಕಾರವಾರ ಕೇವಲ 5 ಕಿಮೀ ವ್ಯಾಪ್ತಿಯಲ್ಲಿ ಹೆಚ್ಚು ಜನಸಂದಣಿ ಹೊಂದಿದೆ. ಇದರಿಂದ ಅಪಾಯ ಹೆಚ್ಚಿದೆ. ಆಸ್ಪತ್ರೆಯ ಸುತ್ತಲಿನ ನಿವಾಸಿಗಳಿಗೂ ತೊಂದರೆ ಉಂಟಾಗಬಹುದು ಎಂದರು. ಗಣಪತಿ ನಾಯ್ಕ, ಸಂದೀಪ ತಳೇಕರ್, ರತ್ನಾಕರ ನಾಯ್ಕ, ಪ್ರೇಮಾನಂದ ಗುನಗಾ, ಮೋಹನ ನಾಯ್ಕ, ರಾಜೇಶ ಮಾಜಾಳಿಕರ್, ಚೇತನ ಹರಿಕಂತ್ರ ಇತರರು ಇದ್ದರು.
ಸುರಕ್ಷತಾ ಕ್ರಮದ ಭರವಸೆ: ಜನರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಪಂ ಸಿಇಒ ಎಂ.ರೋಷನ್ ಶನಿವಾರ ಕ್ರಿಮ್್ಸ ಆಸ್ಪತ್ರೆಯ ಸುತ್ತಲಿನ ನಿವಾಸಿಗಳ ಜತೆ ಶನಿವಾರ ಮಾತುಕತೆ ನಡೆಸಿದರು. ಆಸ್ಪತ್ರೆಯಲ್ಲಿ ಎರಡು ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಫ್ಲಡ್ ಲೈಟ್ ಹಾಕಲಾಗುವುದು. ಆಸ್ಪತ್ರೆ ಕಾಂಪೌಂಡ್ ವಾಲ್ನ ಸುತ್ತ ಮತ್ತಷ್ಟು ಎತ್ತರಕ್ಕೆ ಶೀಟ್ ಅಳವಡಿಸಲಾಗುವುದು ಎಂದು ನೋಡಲ್ ಅಧಿಕಾರಿ, ಜಿಪಂ ಸಿಇಒ ಎಂ.ರೋಷನ್ ಮಾಹಿತಿ ನೀಡಿದ್ದಾರೆ.
ಪ್ಲಾಸ್ಮಾ ಥೆರಪಿಗಾಗಿ ಅರ್ಜಿ: ಕರೊನಾ ಗುಣಮುಖವಾದ ರೋಗಿಯ ರಕ್ತ ತೆಗೆದು ಸೋಂಕಿತರಿಗೆ ನೀಡುವ ಮೂಲಕ ಚಿಕಿತ್ಸೆ ನೀಡುವ ಫ್ಲಾಸ್ಮಾ ಥೆರಪಿಯನ್ನು ಮಾಡಲು ಇಲ್ಲಿನ ಕ್ರಿಮ್್ಸ ಆಸ್ಪತ್ರೆಯಿಂದಲೂ ಅರ್ಜಿ ಸಲ್ಲಿಸಲಾಗಿದೆ ಎಂದು ಜಿಪಂ ಸಿಇಒ ಎಂ.ರೋಷನ್ ತಿಳಿಸಿದ್ದಾರೆ. ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್)ಗೆ ಅರ್ಜಿ ಸಲ್ಲಿಸಲಾಗಿದ್ದು, ಅಲ್ಲಿಂದ ಪರವಾನಗಿ ಬಂದ ನಂತರ ನಾವು ಇದನ್ನು ಕೈಗೊಳ್ಳಲಿದ್ದೇವೆ ಎಂದರು.