ಹಾಸನ: ಚಿತ್ರ ಬಿಡಿಸಿರುವುದರಿಂದ ನಿಮ್ಮ ಮನಸ್ಸಿಗೆ ಆನಂದ ನೀಡುತ್ತದೆ. ದೊಡ್ಡವರಾಗಲಿ, ಚಿಕ್ಕವರಾಗಲಿ ಚಿತ್ರಕಲೆ ಮೈಗೂಡಿಸಿಕೊಳ್ಳುವುದರಿಂದ ಯಾವುದೇ ರೀತಿಯ ಮಾನಸಿಕ ನೋವಿನಿಂದ ದೂರ ಇರುವುದರ ಜತೆಗೆ ಧೈರ್ಯ ತುಂಬುತ್ತದೆ ಎಂದು ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ಹೇಳಿದರು.
ನಗರದ ಅರಳೀಕಟ್ಟೆ ವೃತ್ತದ ಬಳಿ ಇರುವ ಸಂಸ್ಕೃತ ಭವನದಲ್ಲಿ ಶಾಂತಲಾ ಆರ್ಟ್ಸ್ ಗ್ರೂಪ್ ಶೋ ವತಿಯಿಂದ ಹಮ್ಮಿಕೊಂಡಿರುವ ಎರಡು ದಿನಗಳ ಕಾಲ ಚಿತ್ರಕಲಾ ಸ್ಪರ್ಧೆ ಹಾಗೂ ಕಲಾಕೃತಿಗಳ ಪ್ರದರ್ಶನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರಕಲೆ ಎಂಬುದು ಭವಿಷ್ಯವನ್ನು ರೂಪಿಸುವ ಕಲೆಯಾಗಿದೆ. ಇಂದು ಅತ್ಯುತ್ತಮ ಚಿತ್ರಗಳಿಗೆ ಜಾಗತಿಕವಾಗಿ ಮಾರುಕಟ್ಟೆ ಇದೆ. ಈ ಎರಡು ದಿನಗಳ ಚಿತ್ರಕಲೆ ಸ್ಪರ್ಧೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು ಮಾತನಾಡಿ, ಈ ಚಿತ್ರಕಲೆ ಪ್ರದರ್ಶನ ಮತ್ತು ಸ್ಪರ್ಧೆಯು ಸಾಮಾಜಿಕವಾಗಿ ಪ್ರಶಂಸೆಗೆ ಪಾತ್ರವಾಗುತ್ತದೆ. ಮಕ್ಕಳ ಚಿತ್ರಕಲೆ ಸ್ಪರ್ಧೆಯಲ್ಲಿ ಪೋಷಕರು ಕೂಡ ಉತ್ಸಹದಿಂದ ಬಂದಿರುವುದನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ. ಎರಡು ದಿನಗಳ ಕಾಲ ನಡೆಯುವ ಈ ಚಿತ್ರಕಲೆ ಸಮಾರಂಭವನ್ನು ಬಹಳ ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಮಾತನಾಡಿ, ಎರಡು ದಿನಗಳ ಕಾಲ ಮಕ್ಕಳಿಗೆ ಚಿತ್ರಕಲೆ ಬರೆಯುವ ಸ್ಪರ್ಧೆಯನ್ನು ಬಹಳ ಯಶಸ್ವಿಯಾಗಿ ಮತ್ತು ಅರ್ಥಪೂರ್ಣವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಜತೆಗೆ ಸಂಸ್ಕೃತ ಭವನದಲ್ಲಿ ಹಿರಿಯ ಕಲಾವಿದರ ಕೈಚಳಕದ ಚಿತ್ರಕಲೆಯನ್ನು ಅತ್ಯಂತ ಅದ್ಭುತವಾಗಿ ಪ್ರದರ್ಶನಕ್ಕೆ ಇಡಲಾಗಿದೆ. ಚಿತ್ರಕಲೆ ಎಂಬುದು ನಮ್ಮ ಮನಸ್ಸನ್ನು ಮತ್ತು ಸಂತೋಷಕರವಾಗಿರಲು ಸಹಕಾರಿಯಾಗಿದೆ. ಸಂಗೀತ, ಸಾಹಿತ್ಯ, ಚಿತ್ರಕಲೆ ಇವೆಲ್ಲವೂ ಕೂಡ ಮನುಷ್ಯನ ಆರೋಗ್ಯಕ್ಕೆ ಸಹಕಾರಿ ಎಂದು ಕಿವಿಮಾತು ಹೇಳಿದರು.
ಇದೆ ವೇಳೆ ನಿರ್ಮಲಾ ಕಲಾ ಶಾಲೆಯ ಕಲಾವಿದ ಕರದಕಟ್ಟಿ, ಸಾಹಿತಿ ಗೊರೂರು ಅನಂತರಾಜು, ಚಿತ್ರ ಕಲಾವಿದ ಅಮೃತಾಚಾರಿ, ಲೇಖಕಿ ಸಿ. ಸುವರ್ಣಾ, ಚಿತ್ರ ಕಲಾವಿದ ಶಿವಕುಮಾರ್, ಲತಾ, ಬಸವರಾಜ್, ಯೋಗಾನಂದ ಇತರರು ಉಪಸ್ಥಿತರಿದ್ದರು.