ಕಾನಹೊಸಹಳ್ಳಿ: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿ ರಚನೆ ಮಾಡಿರುವ ಆಯೋಗಕ್ಕೆ ಅಧ್ಯಕ್ಷರನ್ನಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರನ್ನು ಸರ್ಕಾರ ನೇಮಿಸಿರುವುದು ಸ್ವಾಗತಾರ್ಹ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.
ಹುಲಿಕೆರೆ ಗ್ರಾಮದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಡವರು, ತಳಸಮುದಾಯದ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಅಪಾರ ಕಾಳಜಿ ಇದೆ. ಸಾಮಾಜಿಕ ನ್ಯಾಯದಲ್ಲಿ ಆಯೋಗ ರಚನೆ ಮಾಡಿರುವುದು ದೇಶದಲ್ಲೇ ಮೊದಲು. ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಎಸ್ಸಿ ಉಪ ಜಾತಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು ಎಂಪರಿಕಲ್ ಡೇಟಾ ಪಡೆಯಲು ನ್ಯಾ.ಎಲ್.ಜೆ.ಹಾವನೂರು, ನ್ಯಾ.ಎ.ಜೆ.ಸದಾಶಿವ ಹಾಗೂ 2011ರ ಜಾತಿಗಣತಿ, ನ್ಯಾ.ಕಾಂತರಾಜ ಆಯೋಗದ ವರದಿಗಳಲ್ಲಿನ ಅಂಶಗಳನ್ನು ಕಡ್ಡಾಯವಾಗಿ ಪರಿಗಣನೆ ತೆಗೆದುಕೊಳ್ಳಬೇಕು ಎಂದ ಅವರು, ಒಳ ಮೀಸಲಾತಿ ಜಾರಿಗೆ ಹೊಸದಾಗಿ ರಚಿಸಿದ ಆಯೋಗದ ಅಧ್ಯಕ್ಷರಾಗಿರುವ ನ್ಯಾ.ಎಚ್.ಎನ್.ನಾಗಮೋಹನದಾಸ್ ಅವರು 2 ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆಂಬ ಭರವಸೆ ಇದೆ. ವರದಿ ಕೈ ಸೇರಿದ ಬಳಿಕ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ. ಅಲ್ಲಿಯವರೆಗೆ ಎಲ್ಲರೂ ತಾಳ್ಮೆಯಿಂದ ಕಾಯಬೇಕು ಎಂದು ತಿಳಿಸಿದರು. ಚಳ್ಳಕೆರೆ ತಾಪಂ ಮಾಜಿ ಸದಸ್ಯ ಸಮರ್ಥ ರಾಯ್, ರಾಹುಲ್ ಇತರರಿದ್ದರು.