ಹಳೇಬೀಡು: ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನಿತ್ಯಾನಂದ ಚುನಾಯಿತರಾದ ಬಳಿಕ ಬೆಂಬಲಿಗರು ಶುಕ್ರವಾರ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಪರ-ವಿರೋಧಿಗಳ ಗುಂಪಿನ ನಡುವಿನ ಘರ್ಷಣೆ ಸಂಭವಿಸಿದೆ. ಪರಾಜಿತ ಅಭ್ಯರ್ಥಿ ಕಾಂತಾಮಣಿ ಅವರ ಪತಿ ರವಿ ಎಂಬುವರು ಹಲ್ಲೆಗೊಳಗಾಗಿದ್ದು, ಪ್ರಕರಣವು ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಹಳೇಬೀಡು ಗ್ರಾಪಂ ಅಧ್ಯಕ್ಷರ ಚುನಾವಣೆಯು ಸರಾಗವಾಗಿ ನಡೆದರೂ ಮೀಸಲಾತಿ ನಿಗದಿಯಾಗಿ ಚುನಾವಣೆ ಘೋಷಣೆಯಾದ ದಿನದಿಂದ ಆಕಾಂಕ್ಷಿಗಳ ನಡುವೆ ಬೂದಿ ಮುಚ್ಚಿದ ಕೆಂಡದಂತಿದ್ದ ಅಸಮಾಧಾನವು ನೂತನ ಅಧ್ಯಕ್ಷರ ಮೆರವಣಿಗೆ ಸಮಯದಲ್ಲಿ ಸ್ಫೋಟಗೊಂಡು ಘರ್ಷಣೆಗೆ ಕಾರಣವಾಗಿದೆ.
ಬಿಸಿಎಂ (ಎ) ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಪದವಿಗಾಗಿ ಮೂವರು ಸದಸ್ಯರ ನಡುವೆ ಪೈಪೋಟಿ ಏರ್ಪಟ್ಟಿತ್ತು. ಮೇಲ್ನೋಟಕ್ಕೆ ಎಲ್ಲವೂ ಸರಿಯಿದ್ದಂತೆ ತೋರುತ್ತಿದ್ದರೂ ಅಂತರಂಗದಲ್ಲಿ ಅಸಮಾಧಾನವು ಹೊಗೆಯಾಡುತ್ತಿದ್ದುದ್ದರಿಂದ, ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ಅಸಹನೆ ಕಟ್ಟೆಯೊಡೆದು ಗಲಭೆಗೆ ಕಾರಣವಾಗಿದೆ. ಆಕಾಂಕ್ಷಿಗಳ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಗ್ರಾಪಂ ಚುನಾವಣೆಯು ಕೊನೆಯ ಕ್ಷಣದಲ್ಲಿ ರಣರಂಗವಾಗಿ ಮಾರ್ಪಟ್ಟು, ಮಾರಕಾಸ್ತ್ರಗಳನ್ನು ಹಿಡಿದು ನಡೆಸಿದ ಗಲಭೆಯಲ್ಲಿ ರವಿ ಅವರು ಗಾಯಗೊಂಡು ಪ್ರಜ್ಞಾಹೀನರಾದ ಕಾರಣ ಅವರನ್ನು ಆಂಬುಲೆನ್ಸ್‌ನಲ್ಲಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.
ನೂತನ ಅಧ್ಯಕ್ಷ ನಿತ್ಯಾನಂದ ಬೆಂಬಲಿಗರ ಗುಂಪು ಪಂಚಾಯಿತಿ ಕಚೇರಿಯಿಂದ ಮೆರವಣಿಗೆ ಹೊರಟು ಪಟ್ಟಣದ ಹೊಯ್ಸಳ ವೃತ್ತಕ್ಕೆ ಬಂದಾಗ ಪರಾಜಿತ ಅಭ್ಯರ್ಥಿ ಕಾಂತಾಮಣಿ ಪರವಾಗಿದ್ದ ಕೆಲವರು ತಗಾದೆ ಆರಂಭಿಸಿದ್ದಾರೆ. ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟಕ್ಕೆ ಕಾರಣವಾಯಿತು ಎನ್ನಲಾಗಿದೆ.
ಸೋಲಿನ ಹತಾಶೆಯಿಂದ ವಿರೋಧಿಗಳೇ ಗಲಭೆಗೆ ಕಾರಣರಾಗಿದ್ದು ಅವರ ವಿರುದ್ಧ ಸೂಕ್ತ ಕ್ರಮ ವಹಿಸಬೇಕೆಂದು ನೂತನ ಅಧ್ಯಕ್ಷ ನಿತ್ಯಾನಂದ ಪೊಲೀಸರಿಗೆ ದೂರು ನೀಡಿದ್ದಾರೆ. ಪರಾಭವಗೊಂಡ ಅಭ್ಯರ್ಥಿ ಕಾಂತಾಮಣಿ ಪ್ರತಿದೂರು ನೀಡಿದ್ದು, ಚುನಾವಣೆ ಗೆದ್ದ ಅಹಂಕಾರದಲ್ಲಿ ವಿಜೇತರ ಬೆಂಬಲಿಗರು ನನ್ನ ಪತಿ ರವಿ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ಆರೋಗ್ಯ ಸ್ಥಿತಿಯು ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಾಗಾಗಿ ಹಲ್ಲೆಕೋರರ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಹಳೇಬೀಡು ಗ್ರಾಪಂಗೆ ನಿತ್ಯಾನಂದ ಅಧ್ಯಕ್ಷ: ಹಳೇಬೀಡು ಗ್ರಾಮ ಪಂಚಾಯಿತಿ 2ನೇ ಅವಧಿಗೆ ಅಧ್ಯಕ್ಷರಾಗಿ ನಿತ್ಯಾನಂದ ಹಾಗೂ ಉಪಾಧ್ಯಕ್ಷೆಯಾಗಿ ಕವಿತಾ ರಮೇಶ್ ಶುಕ್ರವಾರ ಆಯ್ಕೆಯಾದರು.
ಬಿಸಿಎಂಗೆ (ಎ)ಮೀಸಲಾಗಿದ್ದ ಸ್ಥಾನಕ್ಕೆ ನಿತ್ಯಾನಂದ ಹಾಗೂ ಕಾಂತಾಮಣಿ ನಾಮಪತ್ರ ಸಲ್ಲಿಸಿದ್ದರು. 20 ಸದಸ್ಯರನ್ನು ಒಳಗೊಂಡ ಪಂಚಾಯಿತಿಯಲ್ಲಿ ವಿಜೇತ ಅಭ್ಯರ್ಥಿಯ ಪರವಾಗಿ 11 ಹಾಗೂ ವಿರುದ್ಧವಾಗಿ 9 ಮತಗಳು ಚಲಾವಣೆಯಾದವು. ಬಿಸಿಎಂ(ಬಿ) ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕವಿತಾ ರಮೇಶ್ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿ ರಘು ಅವರು ವಿಜೇತ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿ ಪ್ರಮಾಣಪತ್ರವನ್ನು ವಿತರಿಸಿದರು. ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ವಿಜೇತ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸಿ ಮೆರವಣಿಗೆ ನಡೆಸಿ ಸಂಭ್ರಮಿಸಿದರು.