ವಿಜಯವಾಣಿ ಸುದ್ದಿಜಾಲ ಹಾಸನ
ನಗರದ ಈದ್ಗಾ ವೃತ್ತದಲ್ಲಿ ಶನಿವಾರ ರಾತ್ರಿ 11ರ ಸುಮಾರಿನಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಯುವಕನೊಬ್ಬನಿಗೆ ಗಂಭೀರ ಗಾಯಗಳಾಗಿ, ಆಸ್ಪತ್ರೆಗೆ ದಾಖಲಾಗಿದ್ದಾನೆ.
ಪೆನ್ಷನ್ ಮೊಹಲ್ಲಾ ನಿವಾಸಿ ಜಮಾನ್ ಷರೀಫ್ (21) ಗಾಯಗೊಂಡವನು.
ಪೆನ್ಷನ್ ಮೊಹಲ್ಲಾದ ಹೊನ್ನಪ್ಪ ಎಂಬುವರ ಟೀ ಅಂಗಡಿ ಬಳಿ ಕೈಯಲ್ಲಿ ಚಾಕು ಹಿಡಿದು ನಿಂತಿದ್ದ ನಾಲ್ವರು ಹುಡುಗರನ್ನು ಉದ್ದೇಶಿಸಿ ಹೀಗೆಲ್ಲ ಚಾಕು ತೋರಿಸಬೇಡಿ, ಸುಮ್ಮನಿರಿ ಎಂದು ಬುದ್ಧಿಮಾತು ಹೇಳಿ ಜಮಾನ್ ಷರೀಫ್ ಮತ್ತು ಇತರರು ತೆರಳಿದ್ದರು.
ರಾತ್ರಿ 11ಕ್ಕೆ ವಾಕ್ ಮಾಡಲೆಂದು ಈದ್ಗಾ ವೃತ್ತದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಎದುರಾದ ಎಂಟು ಯುವಕರು ಅಡ್ಡಗಟ್ಟಿ ‘ನಾವು ಈ ಏರಿಯಾದ ರೌಡಿಗಳು, ಯಾರಿಗೆ ಬೇಕಾದರೂ ಚಾಕು ತೋರಿಸುತ್ತೇವೆ, ನೀವು ಯಾರು ಅದನ್ನೆಲ್ಲ ಕೇಳೋಕೆ’ ಎಂದು ಕಲಹ ಸೃಷ್ಟಿಸಿದ್ದಾರೆ. ಐವರು ಒಟ್ಟಾಗಿ ಜಮಾನ್ ಷರೀಫ್‌ನನ್ನು ತಬ್ಬಿ ಹಿಡಿದು ಚಾಕುವಿನಿಂದ ಬಲಭಾಗದ ಪಕ್ಕೆ, ಕಾಲಿಗೆ ತಿವಿದು ಗಾಯಗೊಳಿಸಿದ್ದಾರೆ. ಜಗಳ ಬಿಡಿಸಲು ಬಂದ ಇರ್ಷಾದ್ ಮೇಲೂ ಹಲ್ಲೆ ನಡೆಸಿದ್ದಾರೆ. ಜಮಾನ್‌ಗೆ ರಕ್ತ ಸ್ರಾವವಾಗುತ್ತಿದ್ದಂತೆ ಯುವಕರು ಅಲ್ಲಿಂದ ಪರಾರಿಯಾಗಿದ್ದಾರೆ. ನೋವು ತಾಳಲಾರದೆ ಜಮಾನ್ ಜೋರಾಗಿ ಕಿರುಚಾಡಿದ್ದರಿಂದ ಸಾರ್ವಜನಿಕರು ಧಾವಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ಗೌಡ, ಪೆನ್ಷನ್ ಮೊಹಲ್ಲಾ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲಾಗಿದ್ದು ಆರೋಪಿಗಳು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ನಡೆಸುತ್ತಿದ್ದಾರೆ.