ಜಿಲ್ಲೆ

ಎರಡು ಕಾರು, ನೋಂದಣಿ ಸಂಖ್ಯೆ ಒಂದೇ!

ಕಾರವಾರ: ಒಂದೇ ನೋಂದಣಿ ಸಂಖ್ಯೆ ಇರುವ ಎರಡು ಕಾರುಗಳನ್ನು ಕಾರವಾರ ಶಹರ ಠಾಣೆ ಪೊಲೀಸರು ಶುಕ್ರವಾರ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.

ಎರಡೂ ಜಿಪಂ ಅಡಿ ಇರುವ ಸರ್ಕಾರಿ ಇಲಾಖೆಗಳಿಗೆ ಗುತ್ತಿಗೆ ಆಧಾರದ ಮೇಲೆ ಬಿಟ್ಟಿರುವ ಕಾರು. ‘ಆನ್ ಗವರ್ನಮೆಂಟ್ ಡ್ಯೂಟಿ’ ಎಂದು ನಾಮಫಲಕ ಅಳವಡಿಸಿಕೊಂಡಿರುವುದು ಅಚ್ಚರಿಯ ಸಂಗತಿಯಾಗಿದೆ.

ಗ್ರಾಮೀಣಾಭಿವೃದ್ಧಿ ಇಲಾಖೆಯ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಇಇ ಅವರ ಕಚೇರಿಗೆ 2020 ಮೇ 1 ರಿಂದ ಕೆಎ-30 ಎ-3722 ಮಾರುತಿ ಡಿಸಾಯರ್ ವಾಹನವನ್ನು ಬಾಡಿಗೆಗೆ ಗುತ್ತಿಗೆ ಆಧಾರದ ಮೇಲೆ ಓಡಿಸಲು ಕಾರವಾರ ಕಿನ್ನರದ ಸಾಯಿನಾಥ ಕೊಠಾರಕರ್ ಒಪ್ಪಂದ ಮಾಡಿಕೊಂಡಿದ್ದರು.

ಅದೇ ನೋಂದಣಿ ಸಂಖ್ಯೆಯ ಪ್ಲೇಟ್​ನ್ನು ಇನ್ನೊಂದು ಸ್ವಿಫ್ಟ್ ಡಿಸಾಯರ್ ಕಾರಿಗೆ ಕೂರಿಸಿ ಜಿಪಂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಕಾರು ಗುತ್ತಿಗೆಗೆ ನೀಡಲು ಒಪ್ಪಂದ ಮಾಡಿಕೊಂಡಿದ್ದರು.

ಎರಡೂ ಒಂದೇ ನೋಂದಣಿ ಸಂಖ್ಯೆಯ ಕಾರುಗಳು ಓಡುತ್ತಿರುವುದನ್ನು ಡಿವೈಎಸ್​ಪಿ ಅರವಿಂದ ಕಲಗುಜ್ಜಿ ಮಾರ್ಗದರ್ಶನದಲ್ಲಿ ಸಿಪಿಐ ಸಂತೋಷ ಶೆಟ್ಟಿ, ಪಿಎಸ್​ಐ ಸಂತೋಷ ಕುಮಾರ್ ಕಾರ್ಯಾಚರಣೆ ನಡೆಸಿ ಕಾರು ವಶಕ್ಕೆ ಪಡೆದಿದ್ದು, ತನಿಖೆ ಕೈಗೊಂಡಿದ್ದಾರೆ.

ಇಲಾಖೆ ಮೌನ: ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡು ಒಂದು ದಿನವಾದರೂ ಎರಡೂ ಇಲಾಖೆಗಳ ಮುಖ್ಯಸ್ಥರು ದೂರು ಕೊಡಲೂ ಬರದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ಜಿಪಂ ಸಿಇಒ ಅವರ ಜತೆ ರ್ಚಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.