ಬಾಗಲಕೋಟೆ: ವಿಮಾನ ನಿಲ್ದಾಣ ಹಾಗೂ ಕೈಗಾರಿಕಾ ಪ್ರದೇಶದ ಅಭಿವೃದ್ದಿಗಾಗಿ ಭೂಸ್ವಾಧೀನ ವಿರೋಧಿಸಿ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ರೈತರು ನಡೆಸುತ್ತಿರುವ ಧರಣಿ ೧೩೬ನೇ ದಿನ ಮುಗಿಸಿದ್ದು, ರಸ್ತೆ ತಡೆ ಸಹ ಗುರುವಾರ ಎರಡನೇ ದಿನವೂ ಮುಂದುವರೆಯಿತು.
ರೈತರ ಜಮೀನು ಸ್ವಾಧೀನ ಪ್ರಕ್ರಿಯೆ ಮುಂದುವರೆದ ಭಾಗವಾಗಿ ಕೆಐಎಡಿಬಿ ಜಮೀನಿನ ಪಹಣಿ ಲಾಕ್ ಮಾಡಿಸಿದ್ದು, ಅದನ್ನು ಓಪನ್ ಮಾಡಿಸಬೇಕು ಎಂದು ರೈತರು ಎರಡು ದಿನ ರಸ್ತೆ ತಡೆಸಿದರು.
ಬಾಗಲಕೋಟೆ, ಕೆರೂರ, ಬಾದಾಮಿ ರಸ್ತೆಗಳನ್ನು ಬಂದ ಮಾಡಿ ಪ್ರತಿಭಟನೆ ನಡೆಸಿದರು. ಬುಧವಾರ ಅಧಿಕಾರಿಗಳು ನಡೆಸಿದ ಮಾತುಕತೆ ವಿಫಲವಾಗಿದ್ದರಿಂದ ಆಹೋರಾತ್ರಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಗುರುವಾರ ಸಹ ಅದು ಮುಂದುವರೆಸಿದರು. ಇದರಿಂದ ಆ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಆಗಿದ್ದು, ವಾಹನಗಳು ಬೇರೆ ರಸ್ತೆಯ ಮೂಲಕ ಸುತ್ತುವರೆದು ಸಂಚರಿಸಿದವು.
ಕೆಐಎಡಿಬಿಗೆ ಡಿಸಿ ಪತ್ರ :
ಸಮಸ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿರುವುದು ಹಾಗೂ ರಸ್ತೆ ತಡೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಹಿನ್ನಲೆಯಲ್ಲಿ ಬಾಗಲಕೋಟೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಗುರುವಾರ ಕೆಐಎಡಿಬಿಗೆ ಪತ್ರ ಬರೆದಿದ್ದಾರೆ. ಭೂಸ್ವಾಧೀನಕ್ಕೆ ರೈತರು ವಿರೋಧ ಮಾಡುತ್ತಿರುವುದು ಹಾಗೂ ಅವರ ಮನವೊಲಿಕೆಗೆ ಜಿಲ್ಲಾಡಳಿತ ಪ್ರಯತ್ನವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಗ್ರಾಮಸ್ಥರ ಪ್ರತಿಭಟನೆ ಮುಂದುವರೆದಲ್ಲಿ ಶಾಂತಿ ಸುವ್ಯವಸ್ಥೆಗೆ ದಕ್ಕೆ ಉಂಟಾಗುವ ಸಾಧ್ಯತೆಯೂ ಇದೆ. ಹೀಗಾಗಿ ಕೆಐಎಡಿಬಿ ವತಿಯಿಂದ ಉನ್ನತ ಅಧಿಕಾರಿಗಳು ಮಧ್ಯಪ್ರವೇಶಿವಿಕೆ ಅವಶ್ಯಕತೆ ಕಂಡು ಬರುತ್ತಿದೆ. ಉನ್ನತ ಅಧಿಕಾರಿಗಳು ಹಲಕುರ್ಕಿ ಗ್ರಾಮಕ್ಕೆ ಕಳುಹಿಸಿ, ರೈತರೊಂದಿಗೆ ಸಮಾಲೋಚನೆ ನಡೆಸಿ, ಅವರ ಬೇಡಿಕೆ, ಅಹವಾಲುಗಳನ್ನು ನಿಯಮಾನುಸಾರ ಪರಿಗಣಿಸುವ ಕುರಿತು ತುರ್ತು ಕ್ರಮ ಕೈಗೊಂಡಿ ಸಮಸ್ಯೆ ಬಗೆಹರಿಸುವಂತೆ ಕೆಐಎಡಿಬಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.