ಜಿಲ್ಲೆ

ಎರಡನೇ ದಿನಕ್ಕೇ ಕಿತ್ತುಹೋದ ಕಿಟಕಿ! : ಹೊಸ ನಾಡಕಚೇರಿ ಕಟ್ಟಡದ ಕಳಪೆ ಕಾಮಗಾರಿ ಬಯಲು, ತರಾತುರಿಯಲ್ಲಿ ಶುಕ್ರವಾರ ಉದ್ಘಾಟನೆಗೊಂಡಿದ್ದ ಬಿಲ್ಡಿಂಗ್​

ಶಿವಶಂಕರ್​ ಕುದೂರು

ಗ್ರಾಮದಿಂದ 1 ಕಿ.ಮೀ. ದೂರದಲ್ಲಿ ನಿರ್ಮಾಣಗೊಂಡು, ಶುಕ್ರವಾರವಷ್ಟೇ (ಜೂ.24) ತರಾತುರಿಯಾಗಿ ಉದ್ಘಾಟನೆಗೊಂಡಿದ್ದ ನಾಡಕಚೇರಿಯ ಕಿಟಿಕಿ ಎರಡೇ ದಿನಕ್ಕೆ ಕಳಚಿಕೊಂಡಿದೆ. ಇದರಿಂದಾಗಿ ನಾಡಕಚೇರಿಯ ಹೊಸ ಕಟ್ಟಡದ ನಿರ್ಮಾಣ ಕಾಮಗಾರಿಯ ಬಗ್ಗೆ ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಮಾಗಡಿ ತಾಲೂಕು ಕುದೂರು ಗ್ರಾಮದ ಬಸ್​ ನಿಲ್ದಾಣದ ಸಮೀಪ ಖಾಸಗಿ ಕಟ್ಟಡದಲ್ಲಿ ಕುದೂರಿನ ನಾಡಕಚೇರಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿತ್ತು. ದುಬಾರಿ ಬಾಡಿಗೆ ನೀಡುವ ಕಷ್ಟದಿಂದ ಪಾರಾಗಲು ಈ ಕಚೇರಿಗೆ 18.84 ಲಕ್ಷ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಿ, ಜೂ.24ರಂದು ಉದ್ಘಾಟಿಸಲಾಗಿತ್ತು. ಕಟ್ಟಡ ಉದ್ಘಾಟನೆಗೊಂಡು 2 ದಿನ ಕಳೆಯುವಷ್ಟರಲ್ಲಿ ಅದರ ನಿರ್ಮಾಣದ ಹುಳುಕು ಬಹಿರಂಗಗೊಂಡಿದೆ. ಇದು ಹೋಬಳಿಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.

ಉದ್ದೇಶಪೂರ್ವಕವಾಗಿ ಗ್ರಾಮದ ಹೊರಗೆ ನಿರ್ಮಾಣ: ನಾಡಕಚೇರಿಗೆ ಸ್ವಂತ ಕಟ್ಟಡ ಕಟ್ಟಲು ಕುದೂರು ಗ್ರಾಮದಲ್ಲೇ ಸಾಕಷ್ಟು ಸರ್ಕಾರಿ ಭೂಮಿ ಲಭ್ಯವಿತ್ತು. ಆದರೆ, ಉದ್ದೇಶಪೂರ್ವಕವಾಗಿ ಗ್ರಾಮದಿಂದ ಹೊರಗೆ, 1 ಕಿಮೀ ದೂರದಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದೆ. ಇದರಿಂದ ಜನರಿಗೆ ನಾಡಕಚೇರಿಗೆ ಹೋಗಿಬರಲು ಅನನುಕೂಲವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಜೆರಾಕ್ಸ್​ ಮಾಡಿಸಲು ಗ್ರಾಮಕ್ಕೇ ಬರಬೇಕು: ಹೊಸ ನಾಡಕಚೇರಿ ಬಳಿ ಯಾವುದೇ ಸ್ಟೇಷನರಿ ಅಂಗಡಿಗಳಿಲ್ಲ. ಜೆರಾಕ್ಸ್​ ಮಾಡಿಸಲು ಕುದೂರು ಗ್ರಾಮಕ್ಕೇ ಬಂದು, ಕಚೇರಿಗೆ ಹೋಗುವ ಪರಿಸ್ಥಿತಿ ಇದೆ. ಜನರಿಗೆ ಕೂರಲು ಆಸನದ ವ್ಯವಸ್ಥೆ ಮಾಡಿಲ್ಲ. ಇವು ಸೇರಿ ಇನ್ನೂ ಅನೇಕ ಅವ್ಯವಸ್ಥೆಯಿಂದ ಕೂಡಿರುವ ನಾಡಕಚೇರಿಯಿಂದ ಯಾವ ಬಗೆಯ ಸೇವೆಯನ್ನು ನಿರೀಸಲು ಸಾಧ್ಯ ಎಂದು ಮುಖಂಡ ಕೆ.ಆರ್​. ಯತಿರಾಜು ಪ್ರಶ್ನಿಸಿದರು.

ಕಾಂಪೌಂಡ್​ ವ್ಯವಸ್ಥೆ ಇಲ್ಲ: ನಾಡಕಚೇರಿಯ ಸುತ್ತ ಕಾಂಪೌಂಡ್​ ನಿರ್ಮಿಸಲಾಗಿಲ್ಲ. ಸಿಸಿ ಕ್ಯಾಮರಾ ಅಳವಡಿಸಿಲ್ಲ. ಇದರಿಂದಾಗಿ ಕಚೇರಿಯ ಆವರಣ ಪುಂಡರ ತಾಣವಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ಕುದೂರು ನಾಡಕಚೇರಿಗೆ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾದಾಗಿನಿಂದಲೂ ಸಾಕಷ್ಟು ಟೀಕೆಗಳಿಗೆ ಗುರಿಯಾಗಿತ್ತು. ಉದ್ಘಾಟನೆಗೊಂಡ ಎರಡೇ ದಿನಕ್ಕೆ ಕಟ್ಟಡದ ಕಿಟಕಿಗಳು ಕಿತ್ತುಬಂದಿರುವುದು ಈ ಟೀಕೆಗಳನ್ನು ಪುಷ್ಟೀಕರಿಸುತ್ತವೆ. ಇಂಥ ಕಳಪೆ ಕಾಮಗಾರಿಗೆ 18 ಲಕ್ಷ ರೂ. ವೆಚ್ಚವಾಗಿದ್ದರ ಬಗ್ಗೆ ಅಧಿಕಾರಿಗಳು ಮಾಹಿತಿ ಒದಗಿಸಲಿ. ಕೆ.ಆರ್​. ಯತಿರಾಜು, ಮುಖಂಡ ಕುದೂರು ನಾಡಕಚೇರಿಯ ಹೊಸ ಕಟ್ಟಡದ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ. ಸ್ಥಳಕ್ಕೆ ಭೇಟಿ ನೀಡಿ, ಕಟ್ಟಡದ ವಾಸ್ತವ ಸ್ಥಿತಿಗತಿ ಪರಿಶೀಲಿಸುವೆ. ಎ. ಮಂಜುನಾಥ್​ ಮಾಗಡಿ ಶಾಸಕ