ಕಾರವಾರ: ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಜಿಲ್ಲೆಯ ಆಸ್ಪತ್ರೆಗಳು ಸಜ್ಜಾಗಿವೆ. ಸಾಕಷ್ಟು ಹಾಸಿಗೆ, ಆಮ್ಲಜನಕ ಸಿಲಿಂಡರ್, ಔಷಧ ಸಂಗ್ರಹವೂ ಇದೆ. ಜನ ಆತಂಕಪಡುವ ಅವಶ್ಯಕತೆ ಇಲ್ಲ. ಆದರೆ, ರೋಗ ಇನ್ನಷ್ಟು ವ್ಯಾಪಕವಾಗಿ ಹರಡದಂತೆ ತಡೆಯಲು ಕರ್ಫ್ಯೂ ಜಾರಿಗೆ ತಂದಿದ್ದು, ಜನ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಜಿಲ್ಲೆಯ ಸರ್ಕಾರಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ಬೇಕಾದ ಎಲ್ಲ ಸೌಲಭ್ಯವಿದೆ. 200 ಹಾಸಿಗೆಗಳನ್ನು ಕೋವಿಡ್ಗಾಗಿ ಮೀಸಲಿಡಲಾಗಿದೆ. ಅದರಲ್ಲಿ 32 ಎಚ್ಡಿಯು ಬೆಡ್ಗಳು, 168 ಆಕ್ಸಿಜನ್ ಬೆಡ್ಗಳಿವೆ. ಇದನ್ನು ಹೊರತುಪಡಿಸಿ ವೆಂಟಿಲೇಟರ್ ಇಲ್ಲದ 50 ಹೆಚ್ಚುವರಿ ಐಸಿಯು ಬೆಡ್ಗಳಿವೆ. ಎರಡು ದಿನದಲ್ಲಿ ಇನ್ನೂ 65 ಐಸಿಯು ಬೆಡ್ಗಳನ್ನು ಸಿದ್ಧ ಮಾಡಲಾಗುತ್ತದೆ. ಇನ್ನೊಂದು ವಾರದಲ್ಲಿ ಇನ್ನೂ 65 ಬೆಡ್ಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಸದ್ಯ ಸಾಮಾನ್ಯ ಸಮಸ್ಯೆ ಇರುವ ರೋಗಿಗಳಿಗೆ ಆಯಾ ತಾಲೂಕು ಆಸ್ಪತ್ರೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಕಾರವಾರದ ತಜ್ಞ ವೈದ್ಯರ ತಂಡದಿಂದ ತಾಲೂಕು ಆಸ್ಪತ್ರೆಯ ವೈದ್ಯರಿಗೆ ಚಿಕಿತ್ಸೆಗೆ ಸಲಹೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಸಮಸ್ಯೆ ಇರುವಂಥ ಪ್ರಕರಣಗಳಿದ್ದಲ್ಲಿ ಕಾರವಾರ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. ಇಲ್ಲಿ ಬೆಡ್ಗಳು ತುಂಬುವ ಹಂತ ಬಂದರೆ ಮುಂದೆ ಶಿರಸಿ ಹಾಗೂ ಕುಮಟಾ ಆಸ್ಪತ್ರೆಗಳಲ್ಲಿ ಆಮ್ಲಜನಕ ವ್ಯವಸ್ಥೆ ಇರುವ ಕೇಂದ್ರ ಸಿದ್ಧ ಮಾಡಲಾಗುತ್ತಿದೆ ಎಂದು ವಿವರಿಸಿದರು. ಎಡಿಸಿ ಕೃಷ್ಣಮೂರ್ತಿ ಸುದ್ದಿಗೋಷ್ಠಿಯಲ್ಲಿದ್ದರು.
ಕೋವಿಡ್ ಭಯ ಬೇಡ
ಕೋವಿಡ್ ಬಗ್ಗೆ ಜಾಗೃತಿ ಮಾಡಿಕೊಳ್ಳಿ ಭಯಪಡಬೇಕಾದ ಅವಶ್ಯವಿಲ್ಲ ಎಂದು ಮೆಡಿಕಲ್ ಕಾಲೇಜ್ನ ಶ್ವಾಸಕೋಶ ತಜ್ಞ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀನಿವಾಸ ತಿಳಿಸಿದರು. ಕ್ರಿಮ್್ಸ ಆಸ್ಪತ್ರೆಯಲ್ಲಿ ಕಳೆದ ಮೂರು ತಿಂಗಳಿಂದ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯ ವಿವಿಧೆಡೆ ಅತಿ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳನ್ನು ಮಾತ್ರ ಕಾರವಾರ ಆಸ್ಪತ್ರೆಗೆ ಕಳಿಸಲಾಗುತ್ತಿದೆ. 3 ತಿಂಗಳಲ್ಲಿ ಅಂಥ 259 ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಅದರಲ್ಲಿ 190 ಜನ ಗುಣವಾಗಿ ಮರಳಿದ್ದಾರೆ. 7 ಜನ ಮಾತ್ರ ಮೃತಪಟ್ಟಿದ್ದಾರೆ. ಈವರೆಗಿನ ಅನುಭವದಂತೆ ಶೇ. 80 ರಷ್ಟು ಕೋವಿಡ್ ಪಾಸಿಟಿವ್ ಇದ್ದವರಿಗೆ ಯಾವುದೇ ರೋಗ ಲಕ್ಷಣ ಇರುವುದಿಲ್ಲ ಅವರು ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯಬಹುದು. ವಿಟಮಿನ್ ಸಿ ಹಾಗೂ ಜಿಂಕ್ ಮಾತ್ರೆ ಪಡೆದರೆ ಸಾಕು. ಜ್ವರ ಇದ್ದರೆ ಅದರ ಮಾತ್ರೆ ಪಡೆಯಬಹುದಾಗಿದೆ. ನಿಯಮಿತವಾಗಿ ಬಿಪಿ ಹಾಗೂ ರಕ್ತದಲ್ಲಿ ಆಮ್ಲಜನಕದ ಪ್ರಮಾಣವನ್ನು ಪರಿಶೀಲಿಸಬೇಕು. ಆಮ್ಲಜನಕದ ಪ್ರಮಾಣ ಕಡಿಮೆಯಾದರೆ ಅಥವಾ ಓಡಾಟ ಮಾಡುವಾಗ ಉಬ್ಬಸ ಬಂದರೆ ತಕ್ಷಣ ಆಸ್ಪತ್ರೆಗೆ ಬರಬೇಕು. ಇನ್ನು ಶೇ. 17 ರಷ್ಟು ಜನರಲ್ಲಿ ಸ್ವಲ್ಪ ಉಸಿರಾಟದ ಸಮಸ್ಯೆ ಕಂಡುಬರುತ್ತದೆ. ಅವರಿಗೆ ಚಿಕಿತ್ಸೆ ನೀಡಿದರೆ ಗುಣಮುಖವಾಗುತ್ತಾರೆ. ಇನ್ನು ಶೇ. 3 ರಷ್ಟು ಜನ ಮಾತ್ರ ಗಂಭೀರ ಸಮಸ್ಯೆ ಹೊಂದಿರುತ್ತಾರೆ. ಇದರಿಂದ ಜನ ಗಾಬರಿಬೀಳುವ ಅಗತ್ಯವಿಲ್ಲ ಎಂದು ಡಾ.ಶ್ರೀನಿವಾಸ ವಿವರಿಸಿದರು. ಡಾ.ಪ್ರಶಾಂತ, ಡಾ.ಅಮಿತ್ ಕಾಮತ್ ಇತರರು ರೋಗದ ಬಗ್ಗೆ ಮಾಹಿತಿ ನೀಡಿದರು.