ಜಿಲ್ಲೆ

ಎಬಿವಿಪಿ ಮಹಾ ತಿರಂಗ ಯಾತ್ರೆ

Dharwad

ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ಇಲ್ಲಿನ ವಿದ್ಯಾನಗರದ ಬಿವಿಬಿ ಕಾಲೇಜ್​ನಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಗುರುವಾರ ಮಹಾ ತಿರಂಗಾ ಯಾತ್ರೆ ನಡೆಸಿತು.

ಬಿವಿಬಿ ಕಾಲೇಜ್​ನಿಂದ ಪ್ರಾರಂಭಗೊಂಡ ಮಹಾ ತಿರಂಗ ಯಾತ್ರೆ ಹೊಸೂರು, ಬಸವೇಶ್ವರ ವೃತ್ತದ ಮಾರ್ಗವಾಗಿ ಚನ್ನಮ್ಮ ವೃತ್ತದ ನಂತರ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ತಲುಪಿ ಅಂತ್ಯಗೊಂಡಿತು. ನಂತರ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಕೆಎಲ್​ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ರಾಷ್ಟ್ರದ ಹಿತ ದೃಷ್ಟಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನಗೊಳಿಸಿದೆ. ವಿನಾಕಾರಣ ಕಾಯ್ದೆ ಬಗ್ಗೆ ಗೊಂದಲ ಸೃಷ್ಟಿಸುವುದು ಸೂಕ್ತವಲ್ಲ. ಕಾಯ್ದೆ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವ ಅಗತ್ಯವಿದೆ ಎಂದರು.

ಎಬಿವಿಪಿ ಪ್ರಾಂತ ಸಂಘಟನಾ ಕಾರ್ಯದರ್ಶಿ ಮಂಜುನಾಥ ಮೀಸೆ ಮಾತನಾಡಿ, ದೇಶದ ಸಮಗ್ರತೆ, ಸಾರ್ವಭೌಮತೆ, ಸುರಕ್ಷತೆ, ಸುಭದ್ರತೆ ಹಾಗೂ ಸಾಮಾಜಿಕ ಸಾಮರಸ್ಯದ ಕಾಳಜಿಯನ್ನು ಪೌರತ್ವ ಕಾಯಿದೆ ಹೊಂದಿದೆ. ಇದನ್ನು ಕೆಲವರು ತಮ್ಮ ಸ್ವಾರ್ಥಕ್ಕಾಗಿ ಸುಳ್ಳು ಮಾಹಿತಿ ಹರಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಭಾರತವನ್ನು ಮತ್ತಷ್ಟು ಬಲಿಷ್ಠಗೊಳಿಸುವ ದೃಷ್ಟಿಯಿಂದ ಈ ಕಾಯ್ದೆ ಜಾರಿಗೆ ತಂದಿದೆ. ಕೆಲ ವಿರೋಧಿ ಮನಸ್ಸುಗಳು ಮಾನವೀಯ ಮೌಲ್ಯಗಳನ್ನು ಮರೆತು ವರ್ತಿಸುತ್ತಿರುವುದು ದುರಾದೃಷ್ಟ. ಈ ಕಾಯ್ದೆ ಬಗ್ಗೆ ಜನ ಜಾಗೃತಿ ಮೂಡಿಸಲು ಎಪಿವಿಪಿಯಿಂದ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ತಿಳಿಸಲಾಗುತ್ತಿದೆ ಎಂದರು.

ಎಬಿವಿಪಿ ನಗರ ಕಾರ್ಯದರ್ಶಿ ಅರುಣ ಶಾಮನೂರ, ಪ್ರಮುಖರಾದ ಪೃಥ್ವಿ ಕುಮಾರ, ಪ್ರತೀಕ್ ಮಾಳಿ, ಪವನ್ ಕರಿಕಟ್ಟಿ, ಮಹಾಲಕ್ಷ್ಮೀ ಭೂಷಿ, ಹನುಮಂತ ಬಗಳಿ, ರಮೇಶ್ ಲೊಂಡೆ, ಸುಹಾಸ್ ಎಸ್.ಎನ್., ವಿವಿಧ ಕಾಲೇಜ್​ಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.