ಜಿಲ್ಲೆ

ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ:ಜಿಲ್ಲಾಡಳಿತಕ್ಕೆ ಮನವಿ

ಹಾಸನ: ವಿದ್ಯಾರ್ಥಿಗಳಿಗೆ ಸರಿಯಾಗಿ ಬಸ್ ಸೌಲಭ್ಯ ಸಿಗುತ್ತಿಲ್ಲ. ಎಷ್ಟೋ ಹಳ್ಳಿಗಳಿಗೆ ಇವತ್ತಿಗೂ ಬಸ್ ಸಂಪರ್ಕ ಇಲ್ಲವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದ್ದು, ರಾಜ್ಯ ಸರ್ಕಾರ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆಯಿಂದ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ವಿದ್ಯಾರ್ಧಿಗಳಿಗೆ ಆಗುತ್ತಿರುವ ತೊಂದರೆಯನ್ನು ಬಗೆಹರಿಸಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಎಬಿವಿಪಿ ಮುಖಂಡ ಶ್ರೀನಿವಾಸ್ ಸಾವರ್ಕರ್, ಸರ್ಕಾರ ತನ್ನ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ಈ ಡಿವಿಟಿ ಎನ್ನುವ ಅಪ್ಲಿಕೇಶನ್‌ನ್ನು ಜಾರಿಗೆ ತಂದಿದೆ. ಅದರಲ್ಲಿ ನಮಗೇನಿದೆ ಎಂದು ನೋಡಿದರೆ ಸ್ಕಾಲರ್‌ಶಿಪ್ ಸ್ಯಾಂಕ್‌ಸನ್ಡ್ ಎಂದು ತೋರುತ್ತದೆ. ಬ್ಯಾಂಕ್‌ಗೆ ಹೋಗಿ ವಿಚಾರಿಸಿದರೆ ಯಾವುದೇ ಹಣ ಬಂದಿರುವುದಿಲ್ಲ ಎಂದು ದೂರಿದರು.

ಇನ್ನೂ ಶೇ.60 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹಳೆಯ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ವೇತನವೇ ಬಂದಿಲ್ಲ. ಆದರೆ ಹೊಸದಾಗಿ ಅರ್ಜಿ ಹಾಕುವ ಅವಕಾಶವೂ ಮುಗಿದು ಹೋಗಿದೆ ಎಂದರು. ತಂತ್ರಜ್ಞಾನ ಅಳವಡಿಸಿಕೊಳ್ಳುವ ಬಗ್ಗೆ ಅನೇಕ ಯೋಜನೆ ತಂದರೂ ಅವು ಫಲಪ್ರದ ಆಗಲಿಲ್ಲ. ವಿದ್ಯಾರ್ಥಿಗಳಲ್ಲಿ ಗೊಂದಲ ಇದ್ದೇ ಇದೆ. ಸರಕಾರ ಜಾರಿಗೆ ತಂದಿರುವ ಎಸ್‌ಸಿಪಿ ಬಗ್ಗೆ ಇರುವ ನೋಟ್ಸ್‌ಗಳು ಇನ್ನೂ

ಎಲ್‌ಎಂಎಸ್ ಅಲ್ಲಿ ಲಭ್ಯವಿಲ್ಲ. ಇದರ ಬಗ್ಗೆ ಮತ್ತು ಶಿಕ್ಷಣ ಇಲಾಖೆ ಹೆಚ್ಚಿನ ಗಮನ ಹರಿಸಬೇಕೆಂದು ಮನವಿ ಮಾಡಿದರು.

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಭೋಜನ ವೆಚ್ಚ ಹೆಚ್ಚಿಸಬೇಕೆಂಬುದು ಅನೇಕ ವರ್ಷಗಳ ಬೇಡಿಕೆ ಆಗಿದ್ದು, ಈವರೆಗೂ ಸ್ಪಂದನೆ ಸಿಕ್ಕಿಲ್ಲ. ಹಾಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಕೈದಿಗಳಿಗಿಂತ ಕಡಿಮೆ. ದಿನವಹಿ 61 ರೂ.ಗಳಲ್ಲಿ ದಿನಕ್ಕೆ 3 ಬಾರಿ ಪೌಷ್ಟಿಕ ಊಟ ಕಾಫಿ, ಟೀ ಮತ್ತು ಇನ್ನಿತರೆ ಅಲ್ಪಾಹಾರ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಹಾಸ್ಟೆಲ್‌ಗಳು ಸ್ವಚ್ಛವಾಗಿರಬೇಕೆಂದು ಹೇಳುವ ಸರ್ಕಾರ, ಅದಕ್ಕೆಂದು ತಿಂಗಳಿಗೆ

250 ರೂ. ನೀಡುತ್ತದೆ.ಇದರಿಂದ ಸ್ವಚ್ಛತಾ ಕಾರ್ಯ ಸಾಧ್ಯವೇ ಎಂದು ಕೇಳಿದ ಅವರು, ಮುಂದಾದರೂ ಹಾಸ್ಟೆಲ್ ವಿದ್ಯಾರ್ಥಿ ಸಮೂಹಕ್ಕೆ ಪೌಷ್ಟಿಕ ಆಹಾರ, ಸ್ವಚ್ಛತೆ ಹಾಗೂ ಭೋಜನ ವೆಚ್ಚ ಹೆಚ್ಚು ಮಾಡಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಮೈಸೂರು, ಹಾಸನ ಸೇರಿದಂತೆ ವಿವಿಧ ಕಡೆಗಳಲ್ಲಿ ಎದುರಾಗಿರುವ ಅಂಕಪಟ್ಟಿ ಸಮಸ್ಯೆಯನ್ನು ಬಗೆ ಹರಿಸುವಂತೆ ಅವರು ಒತ್ತಾಯಿಸಿದರು. ಮಾರ್ಕ್ಸ್‌ಕಾರ್ಡ್‌ಗೆಂದು 380 ರೂ. ಪಡೆಯುತ್ತಾರೆ.ನಂತರ ಡಿಜಿ ಲಾಕರ್‌ನಲ್ಲಿ ತೆಗೆದುಕೊಳ್ಳಿ ಅಂತಾರೆ. ಡಿಜಿ ಲಾಕರಲ್ಲಿ ಸಾಫ್ಟ್ ಕಾಪಿ ನೀಡುವುದಾದರೆ 380 ರೂ.ಶುಲ್ಕ ಏಕೆ ಪಡೆಯಬೇಕು. ಹಾಸನ ಮತ್ತು ಮೈಸೂರು ವಿವಿಗಳು ಮಾರ್ಕ್ಸ್ ಕಾರ್ಡನ್ನು ಹಾರ್ಡ್ ಕಾಪಿ ರೂಪದಲ್ಲಿ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮನೋಜ್, ಜೀವನ್, ಜ್ಞಾನ, ಲೇಪಾಕ್ಷ, ಅನುಶ್ರೀ, ಧನ್ಯಶ್ರೀ ಇತರರು ಇದ್ದರು.