ಜಿಲ್ಲೆ

ಎಫ್​ಎಂಸಿಜಿ ಕ್ಲಸ್ಟರ್ ಖಾತ್ರಿ

ಬಸವರಾಜ ಇದ್ಲಿ ಹುಬ್ಬಳ್ಳಿ

ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ (ಫೆ.14) ನಡೆದು ಸರಿಯಾಗಿ ಒಂದು ತಿಂಗಳು ಕಳೆಯುತ್ತಿರುವ ಸಂದರ್ಭದಲ್ಲಿ ಧಾರವಾಡ ಜಿಲ್ಲೆಗೆ ಆಶಾಕಿರಣವೊಂದು ಹೊರ ಹೊಮ್ಮಿದೆ.

ಬೆಂಗಳೂರು ಬಿಟ್ಟು ರಾಜ್ಯದ ಇತರ ನಗರಗಳತ್ತ ಕೈಗಾರಿಕೋದ್ಯಮಿಗಳನ್ನು ಸೆಳೆಯುವ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಫಲ ಸಿಕ್ಕಂತಾಗಿದೆ. ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಬಹುದಾದ ಫಾಸ್ಟ್ ಮೂವಿಂಗ್ ಕಂಜೂಮರ್ ಗೂಡ್ಸ್ (ಎಫ್​ಎಂಸಿಜಿ) ಕ್ಲಸ್ಟರ್ ನಿರ್ವಣಕ್ಕೆ ಸಮಾವೇಶದಲ್ಲಿ ಮಾಡಿಕೊಂಡಿದ್ದ ಒಡಂಬಡಿಕೆ ಪೈಕಿ ಇದೀಗ ಮತ್ತೊಂದು ಹೆಜ್ಜೆ ಮುಂದಿಡಲಾಗಿದೆ.

ಧಾರವಾಡದ ಮುಮ್ಮಿಗಟ್ಟಿ ಬಳಿಯ ಅಂದಾಜು 500 ಎಕರೆ ಪ್ರದೇಶದಲ್ಲಿ ಎಫ್​ಎಂಸಿಜಿ ಕ್ಲಸ್ಟರ್ ಸ್ಥಾಪನೆಗೆ ಪರಿಶೀಲನೆ ನಡೆಸಲಾಗಿದೆ. ಬಹುತೇಕ ಅದೇ ಜಾಗ ಅಂತಿಮವಾಗುವ ಸಾಧ್ಯತೆಯೂ ಇದೆ. ಧಾರವಾಡದಿಂದ ಪುಣೆ, ಬೆಂಗಳೂರು, ಹೈದರಾಬಾದ್ ನಗರಗಳು ಸಮ ಅಂತರದಲ್ಲಿ ಇರುವುದು ಮತ್ತು ದಕ್ಷಿಣ ಭಾರತದ ಪ್ರಮುಖ ಕ್ಲಸ್ಟರ್ ಆಗಿ ಧಾರವಾಡ ಅಭಿವೃದ್ಧಿ ಹೊಂದುವ ಎಲ್ಲ ಲಕ್ಷಣಗಳನ್ನು ಹೊಂದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅದೇ ರೀತಿ ಮುಂದಿನ ಪ್ರಕ್ರಿಯೆಗಳು ನಡೆದಿವೆ.

ಫೆ. 3ರಂದು ಬೆಂಗಳೂರಿನಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಎಫ್​ಎಂಸಿಜಿ ಕ್ಲಸ್ಟರ್​ನಲ್ಲಿ 14-15 ಘಟಕಗಳು ಇರಲಿವೆ. ಜ್ಯೋತಿ ಲ್ಯಾಬರೋಟರಿ, ಡಾಬರ್, ಗೋದ್ರೇಜ್, ಹಿಂದುಸ್ತಾನ್ ಲೀವರ್, ವಿಪ್ರೋ ಮುಂತಾದ ಕಂಪನಿಗಳು ಈ ಯುನಿಟ್​ನಲ್ಲಿ ಇರಲಿವೆ.

ಈ ಎಲ್ಲ ಘಟಕಗಳ ಮಾಲೀಕರು ಸೇರಿ ನಾಲ್ಕು ಜನರ ‘ವಿಜನ್ ಗ್ರುಪ್’ ರಚನೆ ಮಾಡಿಕೊಂಡಿದ್ದು, ಆ ಗ್ರುಪ್​ನ ಸದಸ್ಯರು ಸರ್ಕಾರದೊಂದಿಗೆ ಪತ್ರ ವ್ಯವಹಾರ ಮುಂದುವರಿಸಿದ್ದಾರೆ. ಜಾಗ ಕೂಡ ನೋಡಿ ಹೋಗಿದ್ದಾರೆ.

ಒಂದೊಮ್ಮೆ ಎಫ್​ಎಂಸಿಜಿ ಕ್ಲಸ್ಟರ್ ಕಾರ್ಯಾರಂಭ ಮಾಡಿದರೆ ಇಂಜಿನಿಯರಿಂಗ್, ಪ್ಯಾಕೇಜಿಂಗ್, ಲಾಜಿಸ್ಟಿಕ್ಸ್ ಸೇರಿ ಇತರೆ ಹತ್ತಾರು ಉದ್ಯೋಗಗಳ ಬಾಗಿಲು ತೆರೆದುಕೊಳ್ಳಲಿದೆ. ನೇರ ಉದ್ಯೋಗ ಅಷ್ಟೇ ಅಲ್ಲ ಸಾವಿರಾರು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ.

ಯಾವ ಕಂಪನಿ ಬರಲಿವೆ: ಫೆ. 14ರಂದು ಸಮಾವೇಶದಲ್ಲಿ ಒಡಂಬಡಿಕೆ ಮಾಡಿಕೊಂಡಿದ್ದ ಕಂಪನಿಗಳ ಪೈಕಿ ರಾಜೇಶ ಎಕ್ಸಪೋರ್ಟ್​ನವರು ಬೇಲೂರು- ಕೋಟೂರ, ಗಾಮನಗಟ್ಟಿ, ಇಟಿಗಟ್ಟಿಯಲ್ಲಿರುವ ಭೂಮಿ ನೋಡಿದ್ದಾರೆ. ಇವುಗಳಲ್ಲಿ ಒಂದನ್ನು ಅಂತಿಮಗೊಳಿಸುವ ತಯಾರಿಯಲ್ಲಿದ್ದಾರೆ. ರಾಜೇಶ ಎಕ್ಸ್​ಪೋರ್ಟ್​ನವರು ಧಾರವಾಡದಲ್ಲಿ ಹಂತ ಹಂತವಾಗಿ 50 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದ್ದಾರೆ. ಅಂದಾಜು 10 ಸಾವಿರ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ.

ಇನ್ನೂ ನಾಲ್ಕೈದು ಕಂಪನಿಯವರು ಸರ್ಕಾರಕ್ಕೆ ವಿಸõತ ಯೋಜನಾ ವರದಿ ಸಲ್ಲಿಸಿದ್ದಾರೆ. ಈ ಎಲ್ಲ ಪ್ರಸ್ತಾವನೆಗಳು ಹಾಗೂ ಒಟ್ಟಾರೆ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶದ ನಂತರದ ಎರಡು ತಿಂಗಳ ಪ್ರಗತಿ ಪರಿಶೀಲನೆ ಏಪ್ರಿಲ್​ನಲ್ಲಿ ನಡೆಯಲಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಟೂ ವ್ಹೀಲರ್ ಇಲೆಕ್ಟ್ರಿಕ್ ವೆಹಿಕಲ್ ಕಂಪನಿಯವರು ಬೇಲೂರ ಬಳಿ ಜಮೀನು ನೋಡಿದ್ದಾರೆ. ಐಟಿ- ಬಿಟಿ ಕಂಪನಿಯವರು ಸಹ ಆಸಕ್ತಿ ವಹಿಸಿದ್ದಾರೆ. ಧಾರವಾಡ ಮಾತ್ರವಲ್ಲ, ಕೊಪ್ಪಳ, ಗದಗ, ಹಾವೇರಿ, ಬೆಳಗಾವಿ ಮುಂತಾದ ಜಿಲ್ಲೆಗಳಲ್ಲಿ ಘಟಕ ಆರಂಭಕ್ಕೆ ಪ್ರಸ್ತಾವನೆಗಳು ಸಲ್ಲಿಕೆಯಾಗುವ ಹಂತದಲ್ಲಿವೆ.

ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ ರಚಿಸಿ: ವಿಪರ್ಯಾಸದ ಸಂಗತಿ ಎಂದರೆ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶದ ನಂತರದ ಚಟುವಟಿಕೆಗಳಾದ ವಿವರವಾದ ಪ್ರಸ್ತಾವನೆ ಸಲ್ಲಿಕೆ ಸೇರಿ ಎಲ್ಲದಕ್ಕೂ ಬೆಂಗಳೂರಿಗೆ ಹೋಗಬೇಕಿದೆ. ಇದು ಮುಂದಿನ ದಿನಗಳಲ್ಲಿ ಈ ಭಾಗದ ಕೈಗಾರಿಕೆ ಬೆಳವಣಿಗೆಗೆ ಅಡ್ಡಿಯಾದರೂ ಅಚ್ಚರಿ ಇಲ್ಲ. ಎಲ್ಲವೂ ಇಲ್ಲೇ ಅಂತಿಮವಾಗಬೇಕು. ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ ಶೀಘ್ರ ಆರಂಭಿಸಿ ಅದಕ್ಕೆ ಸ್ವಾಯುತ್ತ ಅಧಿಕಾರ ನೀಡಬೇಕು. ಎಲ್ಲದಕ್ಕೂ ಬೆಂಗಳೂರಿನತ್ತ ನೋಡುವುದು ತಪ್ಪಬೇಕು ಎನ್ನುತ್ತಾರೆ ಕೈಗಾರಿಕೋದ್ಯಮಿಗಳು.

ಧಾರವಾಡದಲ್ಲಿ ಎಫ್​ಎಂಸಿಜಿ ಕ್ಲಸ್ಟರ್ ನಿರ್ವಣಕ್ಕೆ ಜಾಗ ವೀಕ್ಷಿಸಿರುವ ಉದ್ಯಮಪತಿಗಳು ಇನ್ವೆಸ್ಟ್ ಕರ್ನಾಟಕ ಸಮಾವೇಶದ ನಂತರ ಮೊದಲ ಹೆಜ್ಜೆ ಇಟ್ಟಿದ್ದಾರೆ. ಅಲ್ಲದೆ, ನಾಲ್ಕೈದು ಕಂಪನಿಗಳು ವಿವರವಾದ ಪ್ರಸ್ತಾವನೆ ಸಲ್ಲಿಸಿವೆ. ಏಪ್ರಿಲ್ ಎರಡನೇ ವಾರ ಬೆಂಗಳೂರಲ್ಲಿ ಪ್ರಗತಿ ಪರಿಶೀಲನೆ ನಡೆಯಲಿದೆ. | ಮೋಹನ ಭರಮಕ್ಕನವರ ಡಿಐಸಿ ಜಂಟಿ ನಿರ್ದೇಶಕ, ಧಾರವಾಡ