ಜಿಲ್ಲೆ

ಎಫ್‌ಡಿ ಹಣ ನೀಡದ ಸಹಕಾರ ಸಂಘದ ವಿರುದ್ಧ ಆಕ್ರೋಶ

ಕೊಳ್ಳೇಗಾಲ: ಪಟ್ಟಣದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹೂಡಿಕೆ ಮಾಡಲಾಗಿದ್ದ ಎಫ್‌ಡಿ ಹಣವನ್ನು ಬ್ಯಾಂಕ್ ಅಧಿಕಾರಿಗಳು ಹಿಂದಿರುಗಿಸುತ್ತಿಲ್ಲ ಎಂದು ಶುಕ್ರವಾರ ವ್ಯಕ್ತಿಯೊಬ್ಬರು ಬ್ಯಾಂಕ್‌ನ ಗೇಟ್‌ಗೆ ಬೀಗ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಮಧುವನಹಳ್ಳಿ ಗ್ರಾಮದ ಚಿಕ್ಕನಂಜಶೆಟ್ಟಿ ಅವರ ಮಗ ಕೃಷ್ಣ ಬ್ಯಾಂಕ್ ಗೇಟ್‌ಗೆ ಬೀಗ ಹಾಕಿದವ. ರೈತ ಚಿಕ್ಕನಂಜಶೆಟ್ಟಿ ಕಸಬಾ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 14 ಲಕ್ಷ ರೂ. ಎಫ್‌ಡಿ ಇಟ್ಟಿದ್ದರು. ಇತ್ತೀಚೆಗೆ ಚಿಕ್ಕನಂಜಶೆಟ್ಟಿ ಅವರಿಗೆ ಕಿಡ್ನಿ, ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಹಣವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಚಿಕ್ಕನಂಜಶೆಟ್ಟಿ ಅವರ ಮಗ ಆಟೋ ಚಾಲಕ ಕೃಷ್ಣ ಎಫ್‌ಡಿ ಹಣವನ್ನು ಪಡೆಯಲು ಬ್ಯಾಂಕ್‌ಗೆ ಹೋದಾಗ ಬ್ಯಾಂಕ್ ಅಧಿಕಾರಿಗಳು ಹಣ ನೀಡದ ಹಿನ್ನೆಲೆಯಲ್ಲಿ ಬೇಸತ್ತು ಬ್ಯಾಂಕ್ ಗೇಟಿಗೆ ಬೀಗ ಜಡಿದು ಪ್ರತಿಭಟಿಸಿದ್ದಾರೆ.

ನನ್ನ ತಂದೆ ಚಿಕ್ಕನಂಜಶೆಟ್ಟಿ ಸಂಘದಲ್ಲಿ 14 ಲಕ್ಷ ರೂ. ಎಫ್‌ಡಿ ಇಟ್ಟಿದ್ದಾರೆ. 4 ತಿಂಗಳ ಹಿಂದೆ 6 ಲಕ್ಷ ರೂ. ಮೆಚ್ಯೂರಿಟಿ ಬಂದಿದೆ. ಈ ನಡುವೆ ನನ್ನ ತಂದೆ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಎಫ್‌ಡಿ ಹಣವನ್ನು ಪಡೆಯಲು ಬ್ಯಾಂಕ್‌ಗೆ ಅಲೆದು ಸಾಕಾಗಿದೆ. ಬ್ಯಾಂಕ್‌ನ ಸಿಇಒ ನಾಗರಾಜು ಕೈಗೆ ಸಿಗುತ್ತಿಲ್ಲ. ದೂರವಾಣಿ ಮೂಲಕ ಹಣ ಕೇಳಿದರೂ ಕೊಡುತ್ತಿಲ್ಲ. ನೀನು ನನಗೆ ಹಣವನ್ನೇ ಕೊಟ್ಟಿಲ್ಲ ಅನ್ನುತ್ತಾರೆ. ಹಾಗಾಗಿ ಬ್ಯಾಂಕ್ ಗೇಟಿಗೆ ಬೀಗ ಹಾಕಿದ್ದೇನೆ. ಅ. 27ರಂದು ನೊಂದವರ ಜತೆಗೂಡಿ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಕೃಷ್ಣ ಮಾಹಿತಿ ನೀಡಿದರು.

ಅಸಮಾಧಾನ: ಬ್ಯಾಂಕ್‌ನ ಗೇಟ್‌ಗೆ ಹಾಕಲಾಗಿದ್ದ ಬೀಗವನ್ನು ಸಂಜೆ ಯಾರೋ ಒಡೆದು ಹಾಕಿದ್ದರಿಂದ ಕೃಷ್ಣ ಆಕ್ರೋಶ ಹೊರಹಾಕಿದರು.