ಜಿಲ್ಲೆ

ಎಪಿಎಲ್ ಕುಟುಂಬಗಳಿಗೂ ಕೋವಿಡ್ ಪರಿಹಾರ, ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಭರವಸೆ

ಬೆಂ.ಗ್ರಾಮಾಂತರ

ಕೋವಿಡ್ ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕುಟುಂಬ ವರ್ಗದವರಿಗೆ ಸರ್ಕಾರ ನೀಡುತ್ತಿರುವ 1 ಲಕ್ಷ ರೂ. ಪರಿಹಾರವನ್ನು ಎಪಿಎಲ್ ಕುಟುಂಬಗಳಿಗೂ ವಿಸ್ತರಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಭರವಸೆ ನೀಡಿದರು.

ದೇವನಹಳ್ಳಿಯ ಜಿಲ್ಲಾಡಳಿತ ಸಭಾಂಗಣದಲ್ಲಿ ಭಾನುವಾರ ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ಕರೊನಾ ಸೋಂಕಿನಿಂದ ಮೃತಪಟ್ಟವರ ಕುಟುಂಬ ವರ್ಗದವರಿಗೆ ಪರಿಹಾರಧನದ ಚೆಕ್ ವಿತರಿಸಿ ಮಾತನಾಡಿದರು. ಆಧಾರ್ ಸಂಖ್ಯೆ, ವಿಳಾಸ, ಮೊಬೈಲ್ ಸಂಖ್ಯೆ ತಪ್ಪಾಗಿ ನೀಡಿರುವ ಮೃತರ ಕುಟುಂಬದ ವಾರಸುದಾರರು ಸಮರ್ಪಕ ಮಾಹಿತಿ ನೀಡಿ, ಪರಿಹಾರ ಪಡೆಯಬೇಕು ಎಂದು ತಿಳಿಸಿದರು.

ಎರಡೂ ಡೋಸ್ ಕಡ್ಡಾಯ: ಕೋವಿಡ್ ಸೋಂಕು ಅತಿ ಕಡಿಮೆ ಅವಧಿಯಲ್ಲಿ ವೇಗವಾಗಿ ಪಸರಿಸುವ ಮೂಲಕ, ಜನತೆಗೆ ಆತಂಕ ಸೃಷ್ಟಿಸಿದೆ. ಜಿಲ್ಲೆಯ ಜನತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವ ಮೂಲಕ ಧೈರ್ಯದಿಂದ ಇರಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಎರಡೂ ಡೋಸ್ ಲಸಿಕೆ ಪಡೆಯಬೇಕು ಎಂದು ಸಚಿವರು ಹೇಳಿದರು.

ಒಮಿಕ್ರಾನ್ ಎಂಬ ರೂಪಾಂತರಿ ತಳಿಯ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಸಲಹೆ ನೀಡಿದರು.

ಪರಿಹಾರಧನ ಬಿಡುಗಡೆ: ಅತಿವೃಷ್ಟಿಯಿಂದ ಉಂಟಾದ ಹಾನಿ ಕುರಿತಂತೆ ಈಗಾಗಲೇ 2.53 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದೆ ಎಂದು ಎಂಟಿಬಿ ತಿಳಿಸಿದರು.

ಶಾಸಕರಿಂದ ಸಚಿವರಿಗೆ ಮನವಿ: ಜಿಲ್ಲೆಯ ಜನತೆ ಕೋವಿಡ್ ಸೋಂಕಿನಿಂದ ಈಗಾಗಲೇ ಸಾಕಷ್ಟು ಬಳಲಿದ್ದಾರೆ. ಸೋಂಕಿನಿಂದ ಮೃತರಾದ ಕುಟುಂಬ ವರ್ಗದವರಿಗೆ ಮಾನವೀಯ ದೃಷ್ಟಿಯಿಂದ ಪರಿಹಾರಧನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಮಾದರಿಯಲ್ಲೇ ರಾಜ್ಯ ಸರ್ಕಾರವು ಬಿಪಿಎಲ್ ಕುಟುಂಬದವರಿಗೆ ನೀಡುತ್ತಿರುವ ಪರಿಹಾರದಂತೆಯೇ, ಎಪಿಎಲ್ ಕುಟುಂಬ ವರ್ಗದವರಿಗೂ ನೀಡುವಂತೆ ಶಾಸಕ ಟಿ.ವೆಂಕಟರಮಣಯ್ಯ ಸಚಿವರಲ್ಲಿ ಮನವಿ ಮಾಡಿಕೊಂಡರು.

371 ಮಂದಿಗೆ ಚೆಕ್ ವಿತರಣೆ: ಕೋವಿಡ್-19ರ ಸೋಂಕಿನಿಂದ ಮೃತರಾದ ಜಿಲ್ಲೆಯ ಬಿಪಿಎಲ್ ಕುಟುಂದವರ 371 ಸಂಬಂಧಿಕರಿಗೆ 3.71 ಕೋಟಿ ರೂ. ಪರಿಹಾರಧನದ ಚೆಕ್ ವಿತರಿಸಲಾಯಿತು.

ಸಚಿವರಿಂದ ಶ್ರದ್ಧಾಂಜಲಿ: ಚೆಕ್ ವಿತರಣೆಗೂ ಮುನ್ನ ಕರೊನಾದಿಂದ ಮೃತಪಟ್ಟವರ ಆತ್ಮಕ್ಕೆ ಸದ್ಗತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಒಮಿಕ್ರಾನ್ ಸೋಂಕಿನ ಬಗ್ಗೆ ಆತಂಕ ಸೃಷ್ಟಿಯಾಗಿದೆ. ಈ ಬಗ್ಗೆಯೂ ಎಚ್ಚರವಹಿಸುವಂತೆ ಎಂಟಿಬಿ ನಾಗರಾಜ್ ಮನವಿ ಮಾಡಿದರು.