ಜಿಲ್ಲೆ

ಎಪಿಎಂಸಿಯಲ್ಲಿ ಮತ್ತೆ ವಹಿವಾಟು ಆರಂಭ

ಲಕ್ಷ್ಮೇಶ್ವರ: ಇಲ್ಲಿಯ ಎಪಿಎಂಸಿಯಲ್ಲಿ ಮಂಗಳವಾರದಿಂದ ವ್ಯಾಪಾರಸ್ಥರು ವಹಿವಾಟು ಆರಂಭಿಸಿದ್ದಾರೆ.

ಸರ್ಕಾರ ವಿಧಿಸಿದ ಹೆಚ್ಚುವರಿ ಸೆಸ್ ವಿರೋಧಿಸಿ ವ್ಯಾಪಾರಸ್ಥರು ಟೆಂಡರ್ ಬಂದ್ ಮಾಡಿದ್ದರಿಂದ ಕಳೆದ ಒಂದು ವಾರದಿಂದ ಲಕ್ಷ್ಮೇಶ್ವರ ಎಪಿಎಂಸಿ ವ್ಯಾಪಾರ ಸ್ಥಗಿತಗೊಂಡು ರೈತರು, ಹಮಾಲಿ ಕಾರ್ವಿುಕರು ತೊಂದರೆಗೀಡಾಗಿದ್ದರು. ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದ ರೈತರು ತಮ್ಮ ಫಸಲನ್ನು ಮಾರುಕಟ್ಟೆಗೆ ತಂದು ವಾಪಸ್ ತೆಗೆದುಕೊಂಡು ಹೋಗುತ್ತಿದ್ದರು.

ಪರಿಸ್ಥಿತಿಯನ್ನರಿತ ವ್ಯಾಪಾರಸ್ಥರು ಮಂಗಳವಾರದಿಂದ ಖರೀದಿ ಪ್ರಕ್ರಿಯೆ ಪ್ರಾರಂಭಿಸಿದರು. ಗೊಂದಲದ ನಡುವೆಯೂ ಅಂದಾಜು 1200 ಚೀಲ ಶೇಂಗಾ, ಹೆಸರು, ಜೋಳ ಇತರ ಉತ್ಪನ್ನಗಳ ವಹಿವಾಟು ನಡೆಯಿತು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಆಕರಿಸುತ್ತಿರುವ ಶೇ. 035 ಮಾರುಕಟ್ಟೆ ಶುಲ್ಕವನ್ನು ಶೇ.1ಕ್ಕೆ ಹೆಚ್ಚಿಸಿರುವ ಕ್ರಮ ವಿರೋಧಿಸಿ ವರ್ತಕರು ಟೆಂಡರ್ ಪ್ರಕ್ರಿಯೆ ಬಂದ್ ಮಾಡಿದ್ದರು. ಆದರೆ, ಈ ಬಗ್ಗೆ ರಾಜ್ಯ ಸಮಿತಿಯವರು ಸ್ಪಷ್ಟ ನಿಲುವು ತಾಳದ್ದರಿಂದ ರೈತರಿಗೆ ತೊಂದರೆಯಾಗಬಾರದು ಮತ್ತು ಮಾರುಕಟ್ಟೆ ವ್ಯವಸ್ಥೆಗೆ ಧಕ್ಕೆಯಾಗಬಾರದು ಎಂಬ ಉದ್ದೇಶದಿಂದ ಖರೀದಿ ಪ್ರಾರಂಭಿಸಿದ್ದೇವೆ ಎಂದು ಎಪಿಎಂಸಿ ಕಾರ್ಯದರ್ಶಿ ಎಸ್.ಕೆ. ಕಾಳಪ್ಪನವರ ಹೇಳಿದರು.</