ಜಿಲ್ಲೆ

ಎಪಿಎಂಸಿಯಲ್ಲಿ ಕರೊನಾ ಹಬ್ಬಿಸಲು ಯತ್ನ!

ಹುಬ್ಬಳ್ಳಿ: ಕರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಐದಾರು ರಸ್ತೆಗಳಿಗೆ ಹಂಚಿಕೆ ಮಾಡಲಾಗಿದ್ದ ಇಲ್ಲಿಯ ಎಪಿಎಂಸಿ ಆವರಣದ ತರಕಾರಿ ಮಾರುಕಟ್ಟೆಯನ್ನು ಪುನಃ ಯಥಾಸ್ಥಿತಿಗೆ ತರಲು ಪ್ರಯತ್ನಗಳು ನಡೆದಿವೆ.

ಕರೊನಾ ಮಹಾಮಾರಿ ಕಾಲಿಡುವುದಕ್ಕಿಂತ ಮೊದಲು ಎಪಿಎಂಸಿ ಪ್ರಾಂಗಣದ ಸುಮಾರು 100 ಮೀಟರ್ ಉದ್ದದ ಒಂದೇ ರಸ್ತೆಯಲ್ಲಿ ತರಕಾರಿ ವಹಿವಾಟು ನಡೆಯುತ್ತಿತ್ತು. ನೂರಕ್ಕೂ ಅಧಿಕ ಖರೀದಿದಾರರು, ಸಾವಿರಾರು ಬೆಳೆಗಾರರು, ಚಿಲ್ಲರೆ ವ್ಯಾಪಾರಸ್ಥರು... ಹೀಗೆ 2000ದಷ್ಟು ಜನ ಅಲ್ಲಿ ಸೇರುತ್ತಿದ್ದರು.

ಈ ಎಲ್ಲ ಕಾರಣಗಳಿಂದ, ಕರೊನಾ ಮಹಾಮಾರಿ ವಕ್ಕರಿಸಿದ ಕೆಲ ದಿನಗಳ ನಂತರ ಅಂದಿನ ಜಿಲ್ಲಾಡಳಿತ ಮುತುವರ್ಜಿ ವಹಿಸಿ ಎಪಿಎಂಸಿಯ ಇತರೆ ರಸ್ತೆಗಳಿಗೆ ಹಂಚಿಕೆ ಮಾಡಿ ಒಂದೇ ಕಡೆ ಜನಸಂದಣಿ ಉಂಟಾಗದಂತೆ ಕ್ರಮ ಕೈಗೊಂಡಿತ್ತು.

ಅಕ್ಕಪಕ್ಕದ ರಸ್ತೆಗಳಲ್ಲಿ ತರಕಾರಿ ಮಾರ್ಕೆಟ್​ಗಾಗಿ ಸ್ಥಳ ನಿಗದಿ ಮಾಡಿ ಬಿಳಿ ಪಟ್ಟಿ ಬರೆದು ನಿಗದಿತ ಸ್ಥಳದಲ್ಲೇ ಖರೀದಿದಾರರು ವ್ಯಾಪಾರ ಮಾಡಬೇಕು, ಬೆಳಗ್ಗೆ 6ರ ಹೊತ್ತಿಗೆ ಸಗಟು ವಹಿವಾಟು ಪೂರ್ಣಗೊಳಿಸಬೇಕೆಂಬುದು ಸೇರಿ ವಿವಿಧ ನಿಬಂಧನೆಗಳನ್ನು ವಿಧಿಸಲಾಗಿತ್ತು.

ಅವಳಿನಗರದ ಬೇರೆ ಕಡೆ ಸಂತೆಗಳು ನಡೆಯದ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ಜನರು ಎಪಿಎಂಸಿಗೆ ಬರುತ್ತಿದ್ದಾರೆ. ಕರೊನಾ ಹರಡುತ್ತಿರುವುದರಿಂದ, ತರಕಾರಿ ಮಾರ್ಕೆಟ್ ಇದೇ ರೀತಿ ಮುಂದುವರಿಯುವ ಅವಶ್ಯಕತೆ ಮೇಲ್ನೋಟಕ್ಕೇ ಗೋಚರಿಸುತ್ತದೆ.

ಆದರೆ, ಇದೀಗ ಮತ್ತೆ ತರಕಾರಿ ಮಾರ್ಕೆಟ್​ಅನ್ನು ಯಥಾಸ್ಥಿತಿಗೆ ಕೊಂಡೊಯ್ಯಲು ಕೆಲ ವ್ಯಾಪಾರಿಗಳು ಮುಂದಾಗಿದ್ದಾರೆ. ಈ ಮೊದಲಿನಂತೆ ತಮ್ಮ ಅಂಗಡಿಗಳ ಮುಂದೆ ವ್ಯಾಪಾರಕ್ಕೆ ಅವಕಾಶ ಕೊಡಬೇಕು ಎಂದು ಜಿಲ್ಲಾಡಳಿತವನ್ನು ಕೋರಿದ್ದಾರೆ ಎನ್ನಲಾಗಿದೆ.

ವ್ಯಾಪಾರಸ್ಥರ ಮನವಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಎಪಿಎಂಸಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ವ್ಯಾಪಾರಸ್ಥರನ್ನು ಸೋಮವಾರ ಕರೆದು ರ್ಚಚಿಸಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಸಹದೇವಪ್ಪ ಸುಡಕೇನವರ ಪ್ರತಿಕ್ರಿಯಿಸಿದ್ದಾರೆ.

ಲಾಬಿ: ತರಕಾರಿ ಮಾರ್ಕೆಟ್​ನ ಕೆಲ ವ್ಯಾಪಾರಿಗಳು ತಮ್ಮ ಮಳಿಗೆಗಳ ಮುಂದಿನ ಭಾಗವನ್ನು ಸಣ್ಣ ವ್ಯಾಪಾರಿಗಳಿಗೆ (ಅನಧಿಕೃತವಾಗಿ) ಬಾಡಿಗೆಗೆ ನೀಡಿದ್ದಾರೆ. ಮಾರ್ಕೆಟ್ ಬೇರೆ ಕಡೆ ಸ್ಥಳಾಂತರ ಆಗಿದ್ದರಿಂದ ಈಗ ಬಾಡಿಗೆ ಬರುವುದು ತಪ್ಪಿದೆ. ಹಾಗಾಗಿ ಮಾರುಕಟ್ಟೆಯನ್ನು ಮೊದಲಿನಂತೆ ಒಂದೇ ರಸ್ತೆಗೆ ಸ್ಥಳಾಂತರಿಸಿ ಎಂದು ಕೆಲ ವ್ಯಾಪಾರಸ್ಥರು ಲಾಬಿ ನಡೆಸಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ.

ಷರತ್ತುಗಳು ಅನ್ವಯ:

ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಜಿಲ್ಲಾಡಳಿತ ಸೂಚಿಸುವ ಪರಸ್ಪರ ಅಂತರ ಕಾಯುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಹೆಚ್ಚು ಜನಸಂದಣಿಯಾಗದಂತೆ ನೋಡಿಕೊಳ್ಳುವುದು, ಅಂಗಡಿಗಳ ಮುಂದೆ ವಾಹನ ರ್ಪಾಂಗ್ ಮಾಡದಿರುವುದು ಸೇರಿ ವ್ಯಾಪಾರಸ್ಥರಿಗೆ ಷರತ್ತುಗಳನ್ನು ವಿಧಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.

ನಾಲ್ಕು ದಿನ ನೋಡಿ ಕ್ರಮ...

ಜಿಲ್ಲಾಡಳಿತದ ಕರೊನಾ ನಿಯಮಾವಳಿ ಪಾಲನೆಗೆ ಬದ್ಧರಾಗಿರಬೇಕು. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ವ್ಯಾಪಾರಸ್ಥರಿಗೆ ನಾಲ್ಕು ದಿನ ಅವಕಾಶ ನೀಡಲಾಗಿದೆ. ಆ ನಂತರವೇ ತರಕಾರಿ ಮಾರ್ಕೆಟ್ ಸ್ಥಳಾಂತರದ ಬಗ್ಗೆ ತೀರ್ವನಿಸಲಾಗುವುದು.| ಸಹದೇವಪ್ಪ ಸುಡಕೇನವರ, ಎಪಿಎಂಸಿ ಅಧ್ಯಕ್ಷ ಹುಬ್ಬಳ್ಳಿ