ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರು ಕಟ್ಟೆ ಪ್ರಾಂಗಣವನ್ನು ಸಕಲ ಸವಲತ್ತುಗಳಿಂದ ತುಂಬಿದ ಮಾದರಿ ಮಾರುಕಟ್ಟೆ ಮಾಡ ಬೇಕೆಂಬ ಆಶಯದೊಂದಿಗೆ ನೂತನ ಆಡಳಿತ ಮಂಡಳಿಯು ಮುಂದಡಿ ಇಟ್ಟಿದೆ.
ವರ್ಷದ 12 ತಿಂಗಳು ಇಲ್ಲಿಗೆ ಬೆಳೆಗಾರರು ವಿವಿಧ ಫಸಲುಗಳನ್ನು ತೆಗೆದುಕೊಂಡು ಬಂದು ಮಾರಾಟ ಮಾಡುತ್ತಾರೆ. ಇಲ್ಲಿಯ ವ್ಯಾಪಾರಸ್ಥರು, ಬೆಳೆಗಾರರ ಮಧ್ಯೆ ಅವಿನಾಭಾವ ಸಂಬಂಧ ಇದೆ. ಹಾಗಾಗಿ ವಹಿವಾಟು ದಿನೇದಿನೆ ಹೆಚ್ಚುತ್ತ ಸಾಗಿದೆ. ಈ ದಿಸೆಯಲ್ಲಿ ಸುಧಾರಣೆಗಳನ್ನು ಮಾಡಿ ಎಪಿಎಂಸಿಯನ್ನು ಇನ್ನೂ ಹೆಚ್ಚು ರೈತಸ್ನೇಹಿ ಮಾಡಬೇಕೆಂದು ಇತ್ತೀಚೆಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಸುರೇಶ ಕಿರೇಸೂರ ಹಾಗೂ ಇತರ ಸದಸ್ಯರು ಪಣ ತೊಟ್ಟಿದ್ದಾರೆ. ವಿಸ್ತಾರದಲ್ಲಿ ರಾಜ್ಯದಲ್ಲಿಯೇ ಅತಿ ದೊಡ್ಡ ಮಾರುಕಟ್ಟೆ ಪ್ರಾಂಗಣ ಎಂಬ ಹೆಗ್ಗಳಿಕೆ ಹೊಂದಿರುವ ಹುಬ್ಬಳ್ಳಿ ಎಪಿಎಂಸಿಯಲ್ಲಿ ಇನ್ನೂ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಲು ಸುರೇಶ ಕಿರೇಸೂರ ಅವರು ಅಂದಾಜು 400 ಕೋಟಿ ರೂ.ಗಳ ವಿಸõತ ಯೋಜನೆಯೊಂದನ್ನು ಸಿದ್ಧಪಡಿ ಸಿದ್ದಾರೆ. ಇತ್ತೀಚೆಗೆ ಹುಬ್ಬಳ್ಳಿಗೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಈ ಯೋಜನೆ ಬಗ್ಗೆ ವಿವರಿಸಿ ಅಗತ್ಯ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ.
434.01 ಎಕರೆ ವಿಸ್ತೀರ್ಣ ಹೊಂದಿರುವ ಎಪಿಎಂಸಿಯಲ್ಲಿ ಹಣ್ಣು- ತರಕಾರಿ, ಹೂ, ಉಳ್ಳಾಗಡ್ಡಿ, ಆಲೂಗಡ್ಡೆ, ದವಸ ಧಾನ್ಯಗಳು, ಹತ್ತಿ, ಮೆಣಸಿನಕಾಯಿ, ಶೇಂಗಾ, ಗೋವಿನಜೋಳ ಹೀಗೆ ಎಲ್ಲ ತರಹದ ಕೃಷಿ ಉತ್ಪನ್ನಗಳು ಬರುತ್ತವೆ. ಇದಕ್ಕಾಗಿ ಪ್ರಾಂಗಣದಲ್ಲಿ ಮೂಲ ಸೌಕರ್ಯಗಳಾದ ರಸ್ತೆ, ಚರಂಡಿ, ನೀರು ಸರಬರಾಜು, ವಿದ್ಯುತ್ ವ್ಯವಸ್ಥೆ ಮುಂತಾದವುಗಳನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸಬೇಕಾಗಿದೆ. ಇದಕ್ಕೆ ಎಪಿಎಂಸಿ ನಿಧಿಯಿಂದ ಹಣ ಹೊಂದಿಸುವುದು ಸಾಧ್ಯವಾಗುವುದಿಲ್ಲ. ಸರ್ಕಾರ ರಾಜ್ಯದ ಬೇರೆ ಬೇರೆ ಎಪಿಎಂಸಿಗಳಿಗೆ ನೀಡಿದಂತೆ ಅಗತ್ಯ ಅನುದಾನ ನೀಡಬೇಕು ಎಂದು ಕೋರಲಾಗಿದೆ.
ಆರ್ಥಿಕ ಸಬಲತೆಗೆ ಯೋಜನೆಗಳು
ಎಪಿಎಂಸಿ ಪ್ರಾಂಗಣದಲ್ಲಿ ಕೃಷಿ ಯಂತ್ರೋಪಕರಣ ಹಾಗೂ ಸಂಸ್ಕರಿಸಿದ ಕೃಷಿ ಉತ್ಪನ್ನ ಮಾರಾಟಕ್ಕೆ ಅನುಕೂಲವಾಗಲು ವಾಣಿಜ್ಯ ಮಳಿಗೆ ನಿರ್ವಿುಸಲು 85 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದೆ. ಆರ್ಸಿಸಿ ಚರಂಡಿಯೊಂದಿಗೆ ಪ್ರಾಂಗಣದ ಎಲ್ಲ ರಸ್ತೆಗಳ ಕಾಂಕ್ರೀಟಿಕರಣಕ್ಕೆ 150 ಕೋಟಿ ರೂ., ಯುಜಿಡಿಗೆ 15 ಕೋಟಿ, ಕುಡಿಯುವ ನೀರಿಗೆ 25 ಕೋಟಿ, ಯುಜಿ ಕೇಬಲ್ನೊಂದಿಗೆ ಬೀದಿದೀಪ ಹಾಗೂ ವಿದ್ಯುದ್ದೀಕರಣಕ್ಕೆ 10 ಕೋಟಿ, ಜಾನುವಾರು ಮಾರುಕಟ್ಟೆ ಅಭಿವೃದ್ಧಿಪಡಿಸಲು 25 ಕೋಟಿ, ತರಕಾರಿ ಹಾಗೂ ಹಣ್ಣು ಮಾರುಕಟ್ಟೆ ಸುಧಾರಣೆಗೆ 20 ಕೋಟಿ, ಆಧುನಿಕ ಶೌಚಗೃಹ, ಉಪಾಹಾರ ಮಂದಿರ, ರ್ಪಾಂಗ್, ಪಾರ್ಕ್ ಹಾಗೂ ನಾಲಾ ಸುಧಾರಣೆಗೆ 20 ಕೋಟಿ, ಹಮಾಲಿ ಕಾರ್ವಿುಕರಿಗೆ ವಸತಿ ಸಮುಚ್ಚಯಕ್ಕೆ 35 ಕೋಟಿ , ಪ್ರಾಂಗಣಕ್ಕೆ ಸರಕು ಸಾಗಣೆ ರೈಲು ಮಾರ್ಗ ವಿಸ್ತರಿಸಲು 10 ಕೋಟಿ, ವರ್ತಳ ರಸ್ತೆಗೆ ಸಂಪರ್ಕ ಕಲ್ಪಿಸಲು 5 ಕೋಟಿ ಸೇರಿ ಒಟ್ಟು 400 ಕೋಟಿ ರೂ. ಯೋಜನೆ ಸಿದ್ಧಪಡಿಸಲಾಗಿದೆ. ಈ ಕುರಿತ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗೆ ಸಲ್ಲಿಸಲಾಗಿದ್ದು, ಶೀಘ್ರ ಮಂಜೂರು ಮಾಡಬೇಕೆಂದು ಎಪಿಎಂಸಿ ಅಧ್ಯಕ್ಷ ಕಿರೇಸೂರ ಮನವಿ ಮಾಡಿದ್ದಾರೆ.