ಜಿಲ್ಲೆ

ಎಪಿಎಂಸಿಗಳ ಅಸ್ತಿತ್ವಕ್ಕೆ ಧಕ್ಕೆ

ಸಾಗರ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ 2017 ರ ನಿಯಮಾವಳಿ ಜಾರಿಗೆ ತರುವಂತೆ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿ ಅನುಷ್ಟಾನಕ್ಕೆ ಬಂದರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಅಸ್ತಿತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಸಹಕಾರಿ ಧುರೀಣ, ಮಾಜಿ ಶಾಸಕ ಬಿ.ಆರ್.ಪಾಟೀಲ್ ಹೇಳಿದರು.

ರೈತರಿಗೆ ಸಿಗುತ್ತಿದ್ದ ಸವಲತ್ತು ಹಾಗೂ ಎಪಿಎಂಸಿಗಳಲ್ಲಿನ ಚುನಾಯಿತ ಪ್ರತಿನಿಧಿಗಳ ಹಕ್ಕನ್ನು ಕಿತ್ತುಕೊಂಡು ಅಧಿಕಾರಗಳ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆ ನಿಯಂತ್ರಣ ಮಾಡುವ ಹುನ್ನಾರ ಇದು ಎಂದು ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದರು.

1936ರಿಂದ 2017ರವರೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಂಬಂಧಪಟ್ಟಂತೆ ಬೇರೆ ಬೇರೆ ತಿದ್ದುಪಡಿಗಳು ಆಗಿವೆ. 1936ರ ಬ್ರಿಟಿಷರ ಆಳ್ವಿಕೆ ಸಂದರ್ಭದಲ್ಲಿ ಜಾರಿಯಾದ ಕಾಯ್ದೆ ಹೊರತುಪಡಿಸಿ ಉಳಿದ ಎಲ್ಲ ಸಂದರ್ಭಗಳಲ್ಲಿ ತಿದ್ದುಪಡಿಯಾದ ನಿಯಮಾವಳಿಗಳು ರೈತಪರ ಮತ್ತು ರೈತಪ್ರತಿನಿಧಿಗಳ ಹಿತರಕ್ಷಣೆ ಕಾಳಜಿ ಹೊಂದಿವೆ. 2017ರ ನಿಯಮಾವಳಿ ಜಾರಿಗೆ ಬಂದರೆ ರೈತರ ಹಾಗೂ ರೈತ ಪ್ರತಿನಿಧಿಗಳ ಹಕ್ಕು ಮೊಟಕುಗೊಳಿಸುತ್ತದೆ. ಒಂದರ್ಥದಲ್ಲಿ ಕೃಷಿ ಮಾರುಕಟ್ಟೆಗೆ ಮಾರಕವಾದ ಆದೇಶ ಇದು ಎಂದರು.

ರಾಜ್ಯ ಸರ್ಕಾರ ಕೃಷಿ ಹುಟ್ಟುವಳಿ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಂಬಂಧಿಸಿದಂತೆ ಯಾವುದೇ ನಿಯಮ ಜಾರಿಗೆ ತರಬೇಕಾದರೆ ಎಪಿಎಂಸಿ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ಮಾಡಬೇಕು. ಸದನದಲ್ಲಿ ಚರ್ಚೆ ಮಾಡಬೇಕು. ಕೇಂದ್ರದಿಂದ ಸುತ್ತೋಲೆ ಬಂದಿದೆ ಎಂದು ಏಕಾಏಕಿ ಆದೇಶ ಜಾರಿಗೆ ತಂದರೆ ರೈತವಿರೋಧಿ ನಿಲುವಾಗುತ್ತದೆ. 2017ರ ಕಾಯ್ದೆಯು 1936ರ ಬ್ರಿಟಿಷ್ ಕಾಯ್ದೆಗಿಂತ ಬಿಗಿಯಾಗುವ ಸಾಧ್ಯತೆ ಇದೆ ಎಂದರು.

ಬಿ.ಎಸ್.ಯಡಿಯೂರಪ್ಪ ರೈತ ನಾಯಕ ಎಂಬ ಹೆಸರು ಗಳಿಸಿದ್ದಾರೆ. ಹೀಗಾಗಿ ಅವರು ಮುಖ್ಯಮಂತ್ರಿ ಆಗಿದ್ದಾಗ ರೈತರಿಗೆ, ರೈತರನ್ನು ಪ್ರತಿನಿಧಿಸುವ ಎಪಿಎಂಸಿಗೆ ಅನ್ಯಾಯವಾಗಬಾರದು. ಕೇಂದ್ರದ ಇಲಾಖೆ ಕಳಿಸಿರುವ ಆದೇಶವನ್ನು ರಾಜ್ಯದಲ್ಲಿ ಜಾರಿಗೆ ತರುವ ಮೊದಲು ಸೂಕ್ತ ವೇದಿಕೆಯಲ್ಲಿ ಚರ್ಚೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. ಎಪಿಎಂಸಿ ಅಧ್ಯಕ್ಷ ರವಿಕುಮಾರ್ ಎಚ್.ಎಂ., ಉಪಾಧ್ಯಕ್ಷ ಅಣ್ಣಪ್ಪ ಭೀಮನೇರಿ, ಸದಸ್ಯ ಹುಚ್ಚಪ್ಪ ಮಂಡಗಳಲೆ ಇದ್ದರು.