ಜಿಲ್ಲೆ

ಎಪಿಎಂಸಿ ಸೆಸ್ ವಿರುದ್ಧ ಪ್ರತಿಭಟನೆ

ಹುಬ್ಬಳ್ಳಿ: ಸೆಸ್ ಅಳಿಸಿ ಎಪಿಎಂಸಿ ಉಳಿಸಿ ಹೋರಾಟಕ್ಕೆ ಅಣಿಯಾಗಿರುವ ಇಲ್ಲಿಯ ವ್ಯಾಪಾರಸ್ಥರು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸೋಮವಾರ ಬೆಳಗ್ಗೆ ಎಪಿಎಂಸಿ ಆವರಣದ ಆಹಾರ ಧಾನ್ಯ ವರ್ತಕರ ಸಂಘ, ಉಳ್ಳಾಗಡ್ಡಿ- ಆಲೂಗಡ್ಡೆ ವರ್ತಕರ ಸಂಘ ಸೇರಿ ಎಲ್ಲ ವ್ಯಾಪಾರಸ್ಥರು ಮೆರವಣಿಗೆ ನಡೆಸಿದರು. ಸೆಸ್ ಅಳಿಸಿ ಎಪಿಎಂಸಿ ಉಳಿಸಿ, ಏಕರೂಪ ಕಾಯ್ದೆ ಜಾರಿ ಮಾಡಬೇಕು, ಎಪಿಎಂಸಿ ಒಳಗೆ ವ್ಯಾಪಾರ ಮಾಡುವವರು ಹಾಗೂ ಹೊರಗೆ ವ್ಯಾಪಾರ ಮಾಡುವವರಿಗೆ ಸರ್ಕಾರ ಇಬ್ಬಗೆ ನೀತಿ ಅನುಸರಿಸುವುದನ್ನು ಕೈಬಿಡಬೇಕು ಎಂದು ಘೋಷಣೆ ಕೂಗಿದರು.

ಎಪಿಎಂಸಿ ಆಡಳಿತ ಕಚೇರಿವರೆಗೆ ಮೆರವಣಿಗೆ ನಡೆಸಿದ ನೂರಕ್ಕೂ ಹೆಚ್ಚಿನ ವ್ಯಾಪಾರಸ್ಥರು, ಸಂಪೂರ್ಣ ಸೆಸ್ ರದ್ದು ಪಡಿಸಬೇಕೆಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಬಿಕೋ ಎಂದ ರಸ್ತೆಗಳು: ಸೆಸ್ ವಿರೋಧಿಸಿ ವ್ಯಾಪಾರಸ್ಥರು ಕೈಗೊಂಡ ಅನಿರ್ದಿಷ್ಟ ಬಂದ್ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಎಪಿಎಂಸಿ ಬಿಕೋ ಎನ್ನುತ್ತಿತ್ತು. ಉಳ್ಳಾಗಡ್ಡಿ ಮಾರ್ಕೆಟ್, ದಿನಸಿ (ಅಕ್ಕಿಹೊಂಡ) ಮಾರ್ಕೆಟ್, ಕಾಳುಕಡಿ ಮಾರ್ಕೆಟ್​ನ ಎಲ್ಲ ರಸ್ತೆಗಳು ಖಾಲಿಯಾಗಿದ್ದವು.

ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷ ಶಂಕರ ನೇಗಿನಹಾಳ, ಗೌರವ ಕಾರ್ಯದರ್ಶಿ ಪ್ರಭುಲಿಂಗಪ್ಪ ಅಂಕಲಕೋಟಿ ನೇತೃತ್ವದಲ್ಲಿ ವರ್ತಕರು, ಆಹಾರಧಾನ್ಯ ವರ್ತಕರ ಸಂಘ, ಆಲೂಗಡ್ಡೆ- ಉಳ್ಳಾಗಡ್ಡಿ ವರ್ತಕರ ಸಂಘದ ಪದಾಧಿಕಾರಿಗಳು, ಸದಸ್ಯರು ಪ್ರತಿಭಟನೆಯಲ್ಲಿದ್ದರು.

ವ್ಯಾಪಾರಸ್ಥರ ಮುಖಂಡರಾದ ರಾಜಣ್ಣ ಬತ್ಲಿ, ರಾಜಕಿರಣ ಮೆಣಸಿನಕಾಯಿ, ರವಿ ಮರದ, ಸದಾನಂದ ಶಿಗ್ಗಾಂವಿ, ಫಕಿರೇಶ ಕುರಟ್ಟಿ, ಶಿವಯೋಗಿ ಪೂಜಾರ, ಶಿವಯೋಗಿ ಹೊಸಕಟ್ಟಿ, ಬಸವರಾಜ ಅಂಗಡಿ, ಎ.ಎಂ. ತಲವಾಯಿ, ಗಂಗಾಧರ ಕುರಟ್ಟಿ, ಎಸ್.ಎಂ. ಅಣ್ಣಿಗೇರಿ, ಶಂಕರಣ್ಣ ಕೊಕಾಟಿ, ಎಲ್.ಬಿ. ಪಾಟೀಲ, ಸುರೇಶ ಹಬೀಬ, ಮಹ್ಮದ್​ಅಲಿ ಕಮಾನಗಾರ, ಶಿವಾನಂದ ಸಣ್ಣಕ್ಕಿ, ಮಲ್ಲಿಕಾರ್ಜುನ ಬೋರಟ್ಟಿ, ಗಣೇಶ ಕಟಾರಿಯಾ, ಪ್ರಕಾಶ ಸಾಂಬ್ರಾಣಿ, ಮಂಜುನಾಥ ಮುನವಳ್ಳಿ, ಸಿದ್ಧ್ದಂಗ ಮಮದಾಪುರ, ಬಸೆಟ್ಟೆಪ್ಪ ಮಮದಾಪುರ, ಸೋಮಶೇಖರ ಹದ್ಲಿ, ಜಿ.ಆರ್. ಬೆಲ್ಲದ, ಚನ್ನು ಹೊಸಮನಿ, ಮೋಹನ ಸೋಳಂಕಿ, ಈರಣ್ಣ ತೊರಗಲ್ಲ, ನಾಗಪ್ಪ ಅಳ್ನಾವರ, ಹಿತೇಶ ಬಾಫನಾ ಮುಂತಾದವರು ಮೆರವಣಿಗೆಯಲ್ಲಿದ್ದರು.

ರೈತರಿಗೆ ಅಧ್ಯಕ್ಷರ ಮನವಿ: ವರ್ತಕರ ಅನಿರ್ದಿಷ್ಟಾವಧಿ ಪ್ರತಿಭಟನೆ ಹಿನ್ನೆಲೆಯಲ್ಲಿ ಎಪಿಎಂಸಿ ವಹಿವಾಟು ಸ್ಥಗಿತವಾಗಿದೆ. ಹಾಗಾಗಿ ರೈತರು ಸದ್ಯಕ್ಕೆ ಕೃಷಿ ಉತ್ಪನ್ನ ತೆಗೆದುಕೊಂಡು ಬರಬಾರದು ಎಂದು ಎಪಿಎಂಸಿ ಅಧ್ಯಕ್ಷ ಸಹದೇವಪ್ಪ ಸುಡಕೇನವರ ಮನವಿ ಮಾಡಿದ್ದಾರೆ. ಹುಬ್ಬಳ್ಳಿ ಎಪಿಎಂಸಿಗೆ ಧಾರವಾಡ ಅಲ್ಲದೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ರೈತರು ಫಸಲು ತರುತ್ತಾರೆ. ವ್ಯಾಪಾರಸ್ಥರ ಮುಷ್ಕರ ಮುಗಿದ ನಂತರ ರೈತರು ಫಸಲು ತರಬಹುದು ಎಂದು ಅವರು ತಿಳಿಸಿದ್ದಾರೆ.

ಇಬ್ಬಗೆ ನೀತಿ ಕೈಬಿಡಲು ಸರ್ಕಾರಕ್ಕೆ ವರ್ತಕರ ಒತ್ತಾಯ: ಸೆಸ್ ರದ್ದತಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿ ಸುವಂತೆ ಆಗ್ರಹಿಸಿ ಧಾರವಾಡ ಎಪಿಎಂಸಿ ವರ್ತಕರು ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲು ತೀರ್ವನಿಸಿದ್ದರಿಂದ ನಗರದ ಎಪಿಎಂಸಿ ಬಿಕೋ ಎನ್ನುತ್ತಿತ್ತು. ಸೆಸ್ ರದ್ದು ಮಾಡಿ ಏಕರೂಪ ಕಾಯ್ದೆ ಜಾರಿಗೆ ತರುವುದು, ಎಪಿಎಂಸಿ ಒಳಗೆ, ಹೊರಗೆ ವ್ಯಾಪಾರ ಮಾಡುವವರಿಗೆ ಸರ್ಕಾರ ಇಬ್ಬಗೆ ನೀತಿ ಅನುಸರಿಸುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿ ವ್ಯಾಪಾರ-ವಹಿವಾಟು ಬಂದ್ ಮಾಡಿ ಧರಣಿ ನಡೆಸಲು ತೀರ್ವನಿಸಿದ್ದಾರೆ. ಸರ್ಕಾರ ಇಬ್ಬಗೆ ನೀತಿ ಅನುಸರಿಸುವ ಮೂಲಕ ವ್ಯಾಪಾರಸ್ಥರಲ್ಲಿ ತಾರತಮ್ಯ ಮಾಡುತ್ತಿದೆ. ಹೀಗಾಗಿ ಬೇಡಿಕೆಗಳನ್ನು ಈಡೇರಿಸುವವರೆಗೆ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಲಾಗಿದೆ. ರೈತರು ಕೃಷಿ ಉತ್ಪನ್ನಗಳನ್ನು ತೆಗೆದುಕೊಂಡು ಬರುವುದು ಬೇಡ ಎಂದು ದಲಾಲ ವರ್ತಕರ ಸಂಘದ ಅಧ್ಯಕ್ಷ ಶಿವಶಂಕರ ಹಂಪಣ್ಣವರ ತಿಳಿಸಿದ್ದಾರೆ.