ಯರಗಟ್ಟಿ: ಈ ಭಾಗದ ರೈತ ಸಮುದಾಯಕ್ಕೆ ಕೃಷಿ ಚಟುವಟಿಕೆಗೆ ಅನುಕೂಲತೆ ಕಲ್ಪಿಸುವ ದೃಷ್ಟಿಯಿಂದ ಯರಗಟ್ಟಿಯಲ್ಲಿ ತಾಲೂಕು ಎಪಿಎಂಸಿ ಮತ್ತು ಪಿಎಲ್‌ಡಿ ಬ್ಯಾಂಕ್ ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಯರಗಟ್ಟಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಯರಗಟ್ಟಿ ಸಮಗ್ರ ಅಭಿವೃದ್ಧಿಗೆ ವಿವಿಧ ಯೋಜನೆ ಹಮ್ಮಿಕೊಳ್ಳಲಾಗಿದೆ. ಹಂತ ಹಂತವಾಗಿ ಅವೆಲ್ಲವುಗಳನ್ನು ಕಾರ್ಯಗತಗೊಳಿಸಲಾಗುವುದು. ಯರಗಟ್ಟಿ ಪಪಂ ವ್ಯಾಪ್ತಿಯಲ್ಲಿ ಈಗಾಗಲೇ 5 ಕೋಟಿ ರೂ.ಗಳಲ್ಲಿ ಕೆಲಸ ಪ್ರಾರಂಭವಾಗಿದೆ. ಇನ್ನೂ ಹೆಚ್ಚುವರಿಯಾಗಿ ಮತ್ತೆ 2.5 ಕೋಟಿ ರೂ. ಮಂಜೂರಾಗಿದೆ. ಮಳೆಯಿಂದ ವಿಳಂಬವಾಗಿರುವ ಯರಗಟ್ಟಿ-ಮುನವಳ್ಳಿ ರಸ್ತೆ ನಿರ್ಮಾಣಕ್ಕೆ 22 ಕೋಟಿ ರೂ. ಮತ್ತೆ 4 ಕೋಟಿ ರೂ. ಹೆಚ್ಚುವರಿಯಾಗಿ ಹಣ ಬಂದಿದೆ. ಕೆಲ ದಿನಗಳಲ್ಲಿ ಈ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ಯಲ್ಲಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ ಮಾತನಾಡಿ, ರೈತಾಪಿ ವರ್ಗದ ಜನರಿಗೆ ವಿವಿಧ ಉದ್ದೇಶಕ್ಕೆ ಸಂಘ ಸಂಸ್ಥೆಗಳು ಬಹಳಷ್ಟು ಸಹಕಾರಿಯಾಗುತ್ತವೆ. ಈ ನಿಟ್ಟಿನಲ್ಲಿ ಶಾಸಕ ಆನಂದ ಮಾಮನಿ ಅವರು ಯರಗಟ್ಟಿ ತಾಲೂಕಿಗೆ ಪ್ರತ್ಯೇಕ ಟಿಎಪಿಎಂಸಿಯನ್ನು ಪ್ರಾರಂಭಿಸಲು ಬಹಳಷ್ಟು ಮುತುವರ್ಜಿ ವಹಿಸಿದ್ದಾರೆ ಎಂದರು.
ಅಧ್ಯಕ್ಷರಾಗಿ ವೆಂಕಟೇಶ ದೇವರಡ್ಡಿ, ಉಪಾಧ್ಯಕ್ಷರಾಗಿ ಗುರುನಾಥ ಹೂಗಾರ ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕರಾಗಿ ಬಸಪ್ಪ ನೇಗಿನಾಳ, ಬಸವರಾಜ ಬೆಲ್ಲದ, ಬೀರಪ್ಪ ಕುರಿ, ಮಹಾಂತೇಶ ಗೋಡಿ, ವಿಠ್ಠಲ ಬಂಟನೂರ, ಕುಮಾರ ಹಿರೇಮಠ, ಶಿವಾನಂದ ಕಟ್ಟಿಮನಿ, ಈರವ್ವ ಕತ್ತಿ, ದಾಕ್ಷಾಯಿಣಿ ತೋಟಗಿ, ಹನುಮಂತ ಭಜಂತ್ರಿ, ಹನುಮಂತ ಹಮ್ಮನ್ನವರ, ಕರೇಪ್ಪ ಪೂಜೇರ, ಸದಾನಂದ ಹಣಬರ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಶಾಹೀನ ಅತ್ತಾರ್ ತಿಳಿಸಿದ್ದಾರೆ.
ಪಪಂ ಸದಸ್ಯ ಅಜಿತಕುಮಾರ ದೇಸಾಯಿ, ಮಹಾಂತೇಶ ಜಕಾತಿ, ವಿಶಾಲಗೌಡ ಪಾಟೀಲ, ಎಸ್.ಎಸ್. ಮುಗಳಿ, ಈರಣ್ಣ ಚಂದರಗಿ, ಬಿ.ಕೆ. ಪಾಟೀಲ, ಬಿ.ಎಸ್. ಹಸಬಿ ಇತರರು ಇದ್ದರು.