ಜಿಲ್ಲೆ

ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ವಿರೋಧ

ಕಲಬುರಗಿ: ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುವುದು ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ರೈತರ ಲೂಟಿ, ಕಾರ್ಪೋರೇಟ್ ಕಂಪನಿಗಳಿಗೆ ಮುಕ್ತ ಅವಕಾಶ ನೀಡಿ ಹಮಾಲರು, ಕಾರ್ಮಿಕರು, ನೌಕರರನ್ನು ಬೀದಿಪಾಲು ಮಾಡಲು ಈ ಕಾಯ್ದೆ ತರಲಾಗಿದೆ. ಯಾವುದೇ ಮಿತಿ ಇಲ್ಲದೆ ರೈತರ ಭೂಮಿ ಖರೀದಿಸಲು ಅವಕಾಶ ನೀಡುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿಚಾರ ಕೈಬಿಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆ-2013 ತಿದ್ದುಪಡಿ ತರಲು ಹೊರಟಿರುವುದನ್ನು ರಾಜ್ಯ ಸರ್ಕಾರ ವಿರೋಧಿಸಬೇಕು. ಅಗತ್ಯ ವಸ್ತುಗಳ ಕಾಯ್ದೆ-2020 ವಾಪಸ್ ಪಡೆಯುವಂತೆ ರಾಜ್ಯ ಸಕರ್ಾರ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಬೀಜ ಕಾಯ್ದೆ-2019 ಹಿಂಪಡೆಯಬೇಕು. ಕೃಷಿ ಯೋಗ್ಯ, ಮರಗಳಲ್ಲಿದ ಅರಣ್ಯ ಭೂಮಿ ಸಾಗುವಳಿ ಸಕ್ರಮ ಮಾಡಿ ಕೃಷಿಗೆ ಯೋಗ್ಯವಲ್ಲದ ಬಂಜರು ಭೂಮಿಯನ್ನು ಅರಣ್ಯಕ್ಕೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.
ಕೃಷಿ ಕೂಲಿಕಾರರಿಗೆ ಒಂದು ಸಮಗ್ರ ಕಾನೂನು ಅಂಗೀಕರಿಸಿ ಕಲ್ಯಾಣ ನಿಧಿ ಸ್ಥಾಪಿಸಬೇಕು. ರೈತರು, ಕೃಷಿ ಕಾರ್ಮಿಕರ ಸರ್ಕಾರಿ, ಖಾಸಗಿ ಸಾಲ ಮನ್ನಾ ಮಾಡಬೇಕು. ಲಾಕ್ಡೌನ್ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಬೇಕು. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಡೀಸೆಲ್ ಬೆಲೆ ಇಳಿಸಬೇಕು. ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯ ವೈದ್ಯಕೀಯ ಸಲಕರಣೆ ಒದಗಿಸಬೇಕು. ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸುವ ಬದಲು ಚುನಾವಣೆ ನಡೆಸಬೇಕು ಎಂಬ ಬೇಡಿಕೆಯ ಮನವಿಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಸಲ್ಲಿಸಿದರು.
ಮುಖಂಡರಾದ ಮಾರುತಿ ಮಾನ್ಪಡೆ, ಮೌಲಾ ಮುಲ್ಲಾ, ಜಗದೇವಿ ಹೆಗಡೆ, ಶರಣಬಸಪ್ಪ ಮಮಶೆಟ್ಟಿ, ಅಶೋಕ ಮ್ಯಾಗೇರಿ, ಭೀಮಶಾ, ಮಹೇಶ ಇತರರು ಪಾಲ್ಗೊಂಡಿದ್ದರು.