ಕೆ.ಆರ್.ಪೇಟೆ: ಪಟ್ಟಣದ ಎಪಿಎಂಸಿ ಕಾಂಪೌಂಡ್ ಒಡೆದು ಹಾಕಿದರೂ ಅಧಿಕಾರಿಗಳು ಕ್ರಮವಹಿಸದೆ ಭೂಗಳ್ಳರಿಗೆ ಮಣೆ ಹಾಕುತ್ತಿರುವುದಕ್ಕೆ ಶಾಸಕ ಎಚ್.ಟಿ.ಮಂಜು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಹೊರವಲಯದ ರೇಷ್ಮೆ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಹಿಂದೆ ಎಪಿಎಂಸಿಯವರು ಖಾಸಗಿ ಅವರಿಂದ ಜಮೀನು ಖರೀದಿ ಮಾಡಿದ್ದಾರೆ. ಖರೀದಿಯಂತೆ ಎಪಿಎಂಸಿಗೆ ಖಾತೆಯಾಗಿಲ್ಲ. ಜಮೀನು ಮಾರಿದವ ಕಾಲದ ನಂತರ ಅವರ ಪತ್ನಿ, ಮಕ್ಕಳಿಗೆ ಖಾತೆ ಹೋಗಿದೆ. ಅವರು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾರೆ. ಈಗ ಎಪಿಎಂಸಿ ಕಾಂಪೌಂಡ್ ಒಡೆದಿದ್ದರೂ ಕಾನೂನು ಕ್ರಮವಾಗಿಲ್ಲ. ಅಧಿಕಾರಿಗಳು ಸರ್ಕಾರಿ ಆಸ್ತಿ, ಪಾಸ್ತಿಯನ್ನು ಭೂಗಳ್ಳರಿಗೆ ಕೊಡಿ. ಶಾಸಕನಾಗಿ ಸಾರ್ವಜನಿಕವಾಗಿ ಏನು ಉತ್ತರ ಕೊಡಲಿ ಎಂದು ಕಿಡಿಕಾರಿದರು.
ಕಿಕ್ಕೇರಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕಿ ರೇವತಿ ಅವರಿಗೆ ಫೋನ್ ಕರೆ ಮಾಡಿದರೆ, ಠಾಣೆಯ ಸಿಬ್ಬಂದಿಯನ್ನು ಬಂದೂಕು ಕೊಡಿ ಶಾಸಕರು ಕರೆ ಮಾಡಿದ್ದಾರೆ ಶೂಟ್ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕುತ್ತಾರೆ. ಇಂತಹ ಧಮ್ಕಿ ಎಲ್ಲ ನನ್ನ ಬಳಿ ನಡೆಯಲ್ಲ ಎಂದು ಆ ಠಾಣೆಯ ಎಎಸ್‌ಐ ರಮೇಶ್ ಅವರಿಗೆ ಎಚ್ಚರಿಸಿದರು. ಅವರ ವಿರುದ್ಧ ಗೃಹ ಇಲಾಖೆಗೆ ವರದಿ ನೀಡುವಂತೆ ತಿಳಿಸಿದರು. ಪೊಲೀಸ್ ಇಲಾಖೆ ಶಿಸ್ತು ಎನ್ನುತ್ತಾರೆ. ಇಂತವರಿಂದ ಇಲಾಖೆಗೆ ಅವಮಾನ ಎಂದು ಬೇಸರಿಸಿದರು.
ಪಟ್ಟಣದ ಬಸ್ ಮರು ನಿಲ್ದಾಣಕ್ಕೆ 16 ಕೋಟಿ ರೂ. ಅಂದಾಜು ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಸಾರಿಗೆ ಇಲಾಖೆಯ 2 ಕೋಟಿ ರೂ. ಅನುದಾನ, ಎಸ್‌ಡಿಆರ್‌ಎಫ್ ವತಿಯಿಂದ 2 ಕೋಟಿ ರೂ. ಅನುದಾನ ಸಿಗಲಿದೆ. ಲಭ್ಯತೆ ಅನುದಾನದಿಂದ ಮಳೆಗಾಲದಲ್ಲಿ ಜಲಾವೃತಗೊಳ್ಳುತ್ತಿದ್ದ ನಿಲ್ದಾಣ ಮರು ನಿರ್ಮಿಸುವುದಾಗಿ ಕೆಎಸ್‌ಆರ್‌ಟಿಸಿ ಎಇಇ ಗಣೇಶ್ ತಿಳಿಸಿದರು.
ತಾಲೂಕಿನ ಒಳಕ್ರೀಡಾಂಗಣಕ್ಕೆ ಜಿಮ್ ಮೆಟೀರಿಯಲ್ ದರಪಟ್ಟಿಗಿಂತ ಮೂರುಪಟ್ಟ ಹೆಚ್ಚು ಹಣಕ್ಕೆ ಖರೀದಿಸಿದ್ದಾರೆ. ಇದಕ್ಕೆ ರಾಜ್ಯ ನಿರ್ದೇಶಕರು ಅನುಮೋದನೆ ತಿರಸ್ಕರಿಸಿದರೂ ಮೆಟೀರಿಯಲ್ ಖರೀದಿಸಿ ಹಣ ದುರುಪಯೋಗ ಮಾಡಿರುವುದಾಗಿ ಶಾಸಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರಕಾಶ್‌ಗೆ ತರಾಟೆ ತೆಗೆದುಕೊಂಡರು.
ಅಬಕಾರಿ ಅಧಿಕಾರಿಗೆ ತರಾಟೆ
ಅಬಕಾರಿ ಅಧಿಕಾರಿಗಳು ವ್ಯಾಪಾರ ಮಾಡಕೊಂಡಿದ್ದೀರಿ. ಆಡಿಯೋ, ವಿಡಿಯೋ ಸಮೇತ ಸಾಕ್ಷಿ ಕೊಟ್ಟರೆ ಕ್ರಮ ತೆಗೆದುಕೊಂಡಿಲ್ಲ. ರೇಡ್ ಮಾಡಬೇಕಾದಾಗ ಮಾಹಿತಿ ಕೊಟ್ಟ ಹೋಗುತ್ತೀರಿ ಎಂದು ಅಬಕಾರಿ ಎಸ್‌ಐ ರಾಜಪ್ಪಾಜಿ ಸ್ವಾಮಿಗೆ ತರಾಟೆ ತೆಗೆದುಕೊಂಡರು.
ಗದ್ದೆಹೊಸರು ಕೆರೆ ಸರ್ವೇ ಕ್ರಯ ಮುಗಿಸುವಂತೆ, ಆಯುಷ್ ಆಸ್ಪತ್ರೆ ನಿರ್ಮಾಣಕ್ಕೆ ಹತ್ತು ಗುಂಟೆ ನಿವೇಶನ ಗುರುತಿಸುವಂತೆ ಎಡಿಎಲ್‌ಆರ್ ಸಿದ್ದಯ್ಯಗೆ ಸೂಚನೆ ನೀಡಿದರು. ನಬಾರ್ಡ್‌ಗೆ ಹತ್ತು ಕೋಟಿ ಯೋಜನೆ ಕಾಮಗಾರಿ ನೀಡುವಂತೆ ಕೃಷಿ, ತೋಟಗಾರಿಕೆ, ರೇಷ್ಮೆ, ಎಪಿಎಂಸಿ ಮತ್ತು ಮೀನುಗಾರಿಕೆ ಅಧಿಕಾರಿಗಳಿಗೆ ಸೂಚಿಸಿದರು. ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಸಿಎಸ್‌ಆರ್ ಅನುದಾನದಲ್ಲಿ 7 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮಾದರಿ ಶಾಲೆ ನಿರ್ಮಾಣ ಮಾಡುತ್ತಿರುವುದಾಗಿ ಹೇಳಿದರು.
ಪಟ್ಟಣದ ಸರ್ಕಾರಿ ಶಾಲೆಗೆ 2003ರಲ್ಲಿ 5 ಎಕರೆ 6 ಗುಂಟೆ ಜಮೀನನ್ನು ಹೊಸಹೊಳಲು ಗ್ರಾಮದವರು ದಾನ ನೀಡಿದ್ದರು. ಇದರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 4 ಎಕರೆ 13 ಗುಂಟೆ ವರ್ಗಾವಣೆ ಆಗಿದೆ. ಉಳಿದ 33 ಗುಂಟೆಯಲ್ಲಿ ಕಂದಾಯ ಅಧಿಕಾರಿಗಳ ಶಾಮೀಲಿನಿಂದ ಹತ್ತು ಗುಂಟೆ ಜಮೀನು ಖಾಸಗಿಯವರ ಹೆಸರಿಗೆ ಖಾತೆಯಾಗಿ, ಈಗ 23 ಗುಂಟೆ ಜಮೀನು ಶಾಲೆ ಹೆಸರಿನಲ್ಲಿದೆ. ಅಲ್ಲಿ ಒಂದು ಗುಂಟೆಗೆ 20 ಲಕ್ಷ ರೂ. ಬೆಲೆಯಿದ್ದು ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ಖಾಸಗಿ ಅವರ ಪಾಲಾಗಿದೆ. ಬಿಇಒ ತಿಮ್ಮೇಗೌಡ ಅವರು ಆಸ್ತಿಯನ್ನು ಮತ್ತೆ ಶಾಲೆ ಹೆಸರಿಗೆ ಮಾಲೀಕತ್ವ ಮಾಡಿಸಬೇಕು. ಜತೆಗೆ ಕಂದಾಯ ಇಲಾಖೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮವಹಿಸುವಂತೆ ನಿರ್ದೇಶನ ನೀಡಿದರು.
ಆಲೇನಹಳ್ಳಿ ಡೇರಿ ಕಾರ್ಯದರ್ಶಿ 5-6 ಲಕ್ಷ ರೂ. ಅವ್ಯವಹಾರ ಮಾಡಿರೋದಾಗಿ ತಪ್ಪೊಪ್ಪಿದ್ದಾರೆ. ಅವರಿಂದ ಅವ್ಯವಹಾರದ ಹಣ ವಸೂಲಿ ಮಾಡುವಂತೆ ಸಿಡಿಒ ಭರತಕುಮಾರ್ ಅವರಿಗೆ ತಿಳಿಸಿದರು.
ತಾಪಂ ಆಡಳಿತಾಧಿಕಾರಿ ಆಶಾ, ತಾಪಂ ಇಒ ಸುಷ್ಮಾ, ಗ್ರೇಡ್2 ತಹಸೀಲ್ದಾರ್ ಲೋಕೇಶ್, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಕುಮಾರ್, ಬಿಸಿಎಂ ಅಧಿಕಾರಿ ವೆಂಕಟೇಶ್, ಸೆಸ್ಕ್ ಇಇ ಪುಟ್ಟಸ್ವಾಮಿ, ಎಇಇ ಶಂಕರ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಜಿತ್, ತಾಲೂಕು ಯೋಜನಾಧಿಕಾರಿ ಶ್ರೀನಿವಾಸ್, ಕೆಪಿಟಿಸಿಎಲ್ ಎಇಇ ಮಂಜುನಾಥ್, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.