ಜಿಲ್ಲೆ

ಎಪಿಎಂಸಿ ಕಾಯ್ದೆ ರೈತಸ್ನೇಹಿ ; ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ ಹೇಳಿಕೆ

ತುಮಕೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ನೂತನ ಅಧ್ಯಕ್ಷರಾಗಿ ಬಿಜೆಪಿಯ ಉಮೇಶ್‌ಗೌಡ ಹಾಗೂ ಉಪಾಧ್ಯಕ್ಷರಾಗಿ ಶಿವರಾಜ್ ಬುಧವಾರ ಅಧಿಕಾರ ಸ್ವೀಕರಿಸಿದರು.

ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಸೇರಿ 15 ಸದಸ್ಯರನ್ನು ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಿದ್ದು ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ ಸಮ್ಮುಖದಲ್ಲಿ ಸರಳ ಪದಗ್ರಹಣ ಸಮಾರಂಭ ನಡೆಯಿತು. ಈ ವೇಳೆ ಮಾತನಾಡಿದ ಸುರೇಶ್‌ಗೌಡ, ಕೇಂದ್ರ ಹಾಗೂ ರಾಜ್ಯ ಸರ್ಕಾರ ನೂತನ ಎಪಿಎಂಸಿ ಕಾಯ್ದೆ ಅನುಷ್ಠಾನಗೊಳಿಸಿದ್ದು, ಈ ಕಾಯ್ದೆ ರೈತ ಸ್ನೇಹಿಯಾಗಿದೆ. ಹೊಸ ಕಾಯ್ದೆಯಡಿ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗಲಿದ್ದು ಇದರಿಂದ ಹೆಚ್ಚು ಲಾಭವಾಗಲಿದೆ ಎಂದು ಹೇಳಿದರು.

ರೈತರ ಬೆಳೆಗೆ ಸರಿಯಾದ ಬೆಂಬಲ ಬೆಲೆ ಕೊಡುವುದು ಎಲ್ಲರ ಜವಾಬ್ದಾರಿ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು. ಕರೊನಾ ಸಂಕಷ್ಟ ಕಾಲದಲ್ಲಿ ರೈತರು ಕಷ್ಟಗಳನ್ನು ಎದುರಿಸುತ್ತಿದ್ದು, ಈ ಸಂದರ್ಭದಲ್ಲಿ ಸರ್ಕಾರದ ಜತೆ ಕೊಂಡಿ ರೂಪಿಸುವ ಕೆಲಸವನ್ನು ಎಪಿಎಂಸಿ ಸಮಿತಿ ಮಾಡಬೇಕು ಎಂದರು.  ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮುಖ್ಯವಾಗಿ ಮಾರುಕಟ್ಟೆಯಲ್ಲಿ ರೈತರ ಶೋಷಣೆಯಾಗದಂತೆ ನಿಗಾವಹಿಸಲು ಹಾಗೂ ಮೂಲ ಸೌಲಭ್ಯಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ಸೇರಿ ಪ್ರಾಮಾಣಿಕವಾಗಿಕೆಲಸ ನಿರ್ವಹಿಸಲಾಗುವುದು ಎಂದು ಉಪಾಧ್ಯಕ್ಷ ಶಿವರಾಜ್ ಹೇಳಿದರು.

ಪ್ರಾಮಾಣಿಕ ಸೇವೆಗೆ ಬದ್ಧ: ಕರೊನಾ ಸಂದರ್ಭದಲ್ಲಿ ಬೆಳೆಗೆ ಲಾಭ ಸಿಗದೇ ರೈತರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಎಪಿಎಂಸಿ ಮೂಲಕ ರೈತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು. ನನ್ನ ರಾಜಕೀಯ ಗುರುಗಳಾದ ಬಿ.ಸುರೇಶ್‌ಗೌಡ ಅವರ ಆಶೀರ್ವಾದದಿಂದ ಎಪಿಎಂಸಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದು ಅವರ ಮಾರ್ಗದರ್ಶನದಲ್ಲೇ ರೈತರ ಪರ ಕಾಳಜಿ ವಹಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುವೆ’ ಎಂದು ನೂತನ ಅಧ್ಯಕ್ಷ ಉಮೇಶ್‌ಗೌಡ ಭರವಸೆಯಿತ್ತರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ, ತಾಪಂ ಅಧ್ಯಕ್ಷೆ ಕವಿತಾ, ಉಪಾಧ್ಯಕ್ಷ ಶಾಂತಕುಮಾರ್, ತಾಪಂ ಮಾಜಿ ಅಧ್ಯಕ್ಷ ಗಂಗಾಂಜನೇಯ, ಮುಖಂಡರಾದ ಸಿದ್ದೇಗೌಡ, ರಮೇಶ್, ಸೇರಿದಂತೆ ಎಪಿಎಂಸಿ ನೂತನ ನಾಮ ನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.