ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ವಾಪಸ್ ಪಡೆದಿರುವ ಎಪಿಎಂಸಿ ಕಾಯ್ದೆ ಮುಂದುವರಿಸದಿದ್ದರೆ ಹಾಗೂ ವಿದ್ಯುತ್ ದರ ಇಳಿಕೆ ಮಾಡದಿದ್ದರೆ ಹಂತ ಹಂತವಾಗಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ಕಿಸಾನ್ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಕರ್ನಾಟಕ ಕಾಟನ್ ಅಸೋಸಿಯೇಶನ್ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯಲ್ಲಿ ರಾಜ್ಯದ ವಿವಿಧೆಡೆಯಿಂದ 125ಕ್ಕೂ ಹೆಚ್ಚು ವ್ಯಾಪಾರಸ್ಥರು ಹಾಗೂ ರೈತರು ಪಾಲ್ಗೊಂಡಿದ್ದರು ಎಂದರು.
ಹೋರಾಟದ ಮೊದಲ ಹಂತದಲ್ಲಿ ಆಯಾ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರಿಗೆ ಹಾಗೂ ಇಂಧನ ಮತ್ತು ಕೃಷಿ ಮಾರುಕಟ್ಟೆ ಸಚಿವರಿಗೆ ಮನವಿ ಸಲ್ಲಿಸಲಾಗುವುದು. ಬಳಿಕ ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯವರಿಗೆ ಮನವಿ ನೀಡಲಾಗುವುದು. ಇಷ್ಟಕ್ಕೂ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕಾಟನ್ ಅಸೋಸಿಯೇಶನ್ ಅಧ್ಯಕ್ಷ ಶಾಂತಿಲಾಲ ಓಸ್ತವಾಲ, ಓಂಪ್ರಕಾಶ ಜೈನ್ ಹಾಗೂ ಪ್ರಭು ಅಣ್ಣೆಪ್ಪನವರ ಇದ್ದರು.