ಹುಬ್ಬಳ್ಳಿ: ಕೇಂದ್ರ ಸರ್ಕಾರ ಜಾರಿ ಮಾಡಿದ ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ - ಸೌಲಭ್ಯ) ಸುಗ್ರೀವಾಜ್ಞೆಯಿಂದ ರೈತರು, ಎಪಿಎಂಸಿ ವರ್ತಕರು ಹಾಗೂ ಗ್ರಾಹಕರ ಮೇಲೆ ದುಷ್ಪರಿಣಾಮವಾಗಲಿದೆ ಎಂದು ನಗರದಲ್ಲಿ ಶುಕ್ರವಾರ ನಡೆದ ರಾಜ್ಯ ಮಟ್ಟದ ಸಭೆಯಲ್ಲಿ ಅಭಿಪ್ರಾಯ ಪಡಲಾಯಿತು.
ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ವಾಣಿಜ್ಯೋದ್ಯಮಿಗಳು, ರೈತ ಮುಖಂಡರು, ವಿವಿಧ ಸಂಘ- ಸಂಸ್ಥೆಗಳ ಮುಖಂಡರ ಸಭೆಯಲ್ಲಿ ಸುಗ್ರೀವಾಜ್ಞೆಯನ್ನು ವಿರೋಧಿಸಲಾಗಿದೆ.
ಕೃಷಿ ಮಾರಾಟ ಮಂಡಳಿ ಹಿಂದಿನ ಪ್ರಧಾನ ವ್ಯವಸ್ಥಾಪಕ ಎಸ್. ಶಂಕರಮೂರ್ತಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ಸುಗ್ರೀವಾಜ್ಞೆ ಕುರಿತು ವಿವರವಾಗಿ ತಿಳಿಸಿದರು. 1968ರಿಂದ ಇಲ್ಲಿಯವರೆಗೆ ಎಪಿಎಂಸಿ ಕಾಯ್ದೆಗೆ ಸುಮಾರು 29 ತಿದ್ದುಪಡಿ ಮಾಡಲಾಗಿದೆ. ಈಗ ಮಾತ್ರ ಕೇಂದ್ರ ಸರ್ಕಾರ ತರಾತುರಿಯಲ್ಲಿ ಸುಗ್ರೀವಾಜ್ಞೆ ಹೊರಡಿಸಿದೆ. ರೈತರು ಹಾಗೂ ಎಪಿಎಂಸಿ ವ್ಯಾಪಾರಸ್ಥರೊಂದಿಗೆ ರ್ಚಚಿಸಿ ಕ್ರಮ ಕೈಗೊಳ್ಳಬೇಕಾಗಿತ್ತು ಎಂದರು.
ಎಪಿಎಂಸಿ ಕ್ರಿಯಾ ಸಮಿತಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಯ್ದೆಯಿಂದ ಕೇವಲ ಬಹುರಾಷ್ಟ್ರೀಯ ಕಂಪನಿಗಳು ಲಾಭ ಪಡೆದುಕೊಳ್ಳುತ್ತವೆ ಎಂದು ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷರಾದ ವಸಂತ ಲದವಾ, ವಿ.ಪಿ. ಲಿಂಗನಗೌಡರ, ಹಿರಿಯರಾದ ಸುರೇಶ ಪಾಟೀಲ, ಎಸ್.ಕೆ. ಕುರಡಗಿ, ಪಿ.ಡಿ. ಶಿರೂರ, ವಿಕಾಸ ಸೊಪ್ಪಿನ, ಅರವಿಂದ ಪೈ, ಸಂತೋಷ ಇತರರು ಅಭಿಪ್ರಾಯಪಟ್ಟರು.
‘ಒಂದು ದೇಶ ಒಂದು ತೆರಿಗೆ’ ಎನ್ನುವುದಾದರೆ ಎಪಿಎಂಸಿಯಲ್ಲಿ ಯಾವುದೇ ಸೆಸ್/ಫೀ ಸಂಗ್ರಹ ಮಾಡಬಾರದು. ದೇಶದ ಎಲ್ಲ ಕಡೆ ಒಂದೇ ಕಾನೂನು ಜಾರಿ ಮಾಡಬೇಕು ಎಂದು ಹುಬ್ಬಳ್ಳಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವರಾಜ ಯಕಲಾಸಪುರ ಆಗ್ರಹಿಸಿದರು.
ಕೆಸಿಸಿಐ ಅಧ್ಯಕ್ಷ ಮಹೇಂದ್ರ ಲದ್ದಡ ಸ್ವಾಗತಿಸಿದರು. ಉಪಾಧ್ಯಕ್ಷರಾದ ವಿನಯ ಜವಳಿ, ಸಿದ್ದೇಶ್ವರ ಕಮ್ಮಾರ, ಜಿ.ಜಿ. ಹೊಟ್ಟಿಗೌಡರ, ಗೌರವ ಕಾರ್ಯದರ್ಶಿ ಅಶೋಕ ಗಡಾದ, ಜೊತೆ ಗೌರವ ಕಾರ್ಯದರ್ಶಿ ಉಮೇಶ ಗಡ್ಡದ, ಮಾಜಿ ಅಧ್ಯಕ್ಷರಾದ ಡಿ.ಎಸ್. ಗುಡ್ಡೋಡಗಿ, ರಮೇಶ ಪಾಟೀಲ, ರಾಜಶೇಖರ ಬತ್ಲಿ ಹಾಗೂ ಬಾದಾಮಿ, ಕುಷ್ಟಗಿ, ಕೊಪ್ಪಳ, ಬಾಗಲಕೋಟೆ, ಮುದ್ದೇಬಿಹಾಳ, ಗಜೇಂದ್ರಗಡ, ವಿಜಯಪುರ, ಕುಮಟಾ, ಗದಗ, ಬ್ಯಾಡಗಿ, ಹಾವೇರಿ, ರಾಣೆಬೆನ್ನೂರ, ಧಾರವಾಡ ಭಾಗಗಳಿಂದ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.