ಜಿಲ್ಲೆ

ಎಪಿಎಂಸಿ ಕಾಯ್ದೆ ತಿದ್ದುಪಡಿ ಕೈಬಿಡಿ

Kalaburagi

ಕಲಬುರಗಿ: ಸುಗ್ರೀವಾಜ್ಞೆ ಹೊರಡಿಸಿ ರಾಜ್ಯದ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿರುವುದನ್ನು ಕೈಬಿಡಬೇಕು ಮತ್ತು ಹಾಲಿ ಕಾಯ್ದೆಗೆ ಎಪಿಎಲ್ಎಂ-2017 ಕಾಯ್ದೆ ಮೂಲಕ ತಿದ್ದುಪಡಿ ಮಾಡುವಂತೆ ರಾಜ್ಯ ಸರ್ಕಾರಗಳ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ರೈತ-ಕೃಷಿ-ಕಾರ್ಮಿಕರ ಸಂಘಟನೆ ಮುಖಂಡರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಸರ್ಕಾರವು ಕೇಂದ್ರದ ಅಣತಿಯಂತೆ ಕಾಯ್ದೆಗೆ ಸುಗ್ರೀವಾಜ್ಞೆ ಹೊರಡಿಸಿ ತಿದ್ದುಪಡಿ ಮಾಡಿರುವುದನ್ನು ಆರ್ಕೆಎಸ್ ಬಲವಾಗಿ ವಿರೋಧಿಸುತ್ತದೆ. ರೈತ ವಿರೋಧಿಯಾಗಿರುವ ಸುಗ್ರೀವಾಜ್ಞೆಯನ್ನು ಕೂಡಲೇ ಹಿಂಪಡೆದು ರೈತಪರ ನೀತಿಗಳನ್ನು ಜಾರಿಗೊಳಿಸಿ ರೈತರ ಸಂಕಷ್ಟಗಳನ್ನು ದೂರಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಎಪಿಎಂಸಿಯ ನಿಯಂತ್ರಣವನ್ನು ಮಂಡಿಯ ವ್ಯಾಪ್ತಿಯೊಳಗೆ ಸೀಮಿತಗೊಳಿಸಿರುವ ಎಪಿಎಲ್ಎಂ-2017 ಕಾಯ್ದೆಯು ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಕಾರ್ಪೋರೇಟ್ ವಲಯಗಳಿಗೆ ತೆರೆದಿಟ್ಟಿರುವುದರಿಂದ, ಈಗಿರುವ ಸಮಿತಿಯ ನಿರ್ದೇಶಕರ ಕಾರ್ಯಭಾರಗಳನ್ನು ಬೇರ್ಪಡಿಸಿ, ಎಪಿಎಂಸಿಗೆ ಪರ್ಯಾಯವಾಗಿ ಖಾಸಗಿ ಮಾರುಕಟ್ಟೆ ಯಾರ್ಡಗಳನ್ನು ತೆರೆಯಲು ಅನುವು ಮಾಡಿಕೊಟ್ಟಿದೆ. ಇದರಿಂದಾಗಿ ಕೃಷಿ ಉತ್ಪನ್ನಗಳ ಮಾರುಕಟ್ಟೆ ಮೇಲೆ ಎಪಿಎಂಸಿಯ ನಿಯಂತ್ರಣ ಸಂಪೂರ್ಣವಾಗಿ ಕಳೆದು ಹೋಗುತ್ತದೆ. ವರ್ತಕರು ಮತ್ತು ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಲಾಕ್ಡೌನ್ದಿಂದ ತೊಂದರೆ ಅನುಭವಿಸಿರುವ ಬಡ ಕುಟುಂಬಗಳಿಗೆ ಜೀವನಾವಶ್ಯಕ ವಸ್ತುಗಳನ್ನು ಖರೀದಿಸಿಕೊಳ್ಳಲು ಪ್ರತಿ ಕುಟುಂಬಕ್ಕೆ ಕನಿಷ್ಠ 10 ಸಾವಿರ ರೂ.ಗಳನ್ನು ಕೊಡಬೇಕು. ರೈತರಿಗೆ ಅಗತ್ಯವಿರುವಷ್ಟು ಬಡ್ಡಿರಹಿತ ಸಾಲವನ್ನು ನೀಡಬೇಕು. ಬಡ ರೈತರಿಗೆ ವರ್ಷವಿಡೀ ಉದ್ಯೋಗ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಆರ್ಕೆಎಸ್ ಜಿಲ್ಲಾಧ್ಯಕ್ಷ ಗಣಪತರಾವ್ ಮಾನೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಮಹೇಶ ಎಸ್.ಬಿ, ದೀಪಾ ಡಿಗ್ಗಿಕರ್, ರಾಜೇಂದ್ರ ಅತನೂರ, ವಿಶ್ವನಾಥ ಸಿಂಗೆ ಮೊದಲಾದವರಿದ್ದರು.