ಲಕ್ಷ್ಮೇಶ್ವರ: ಎಪಿಎಂಸಿ ಕಾಯ್ದೆ ತಿದ್ದುಪಡಿ, ಗ್ರಾಮ ಪಂಚಾಯಿತಿಗಳಿಗೆ ನಾಮನಿರ್ದೇಶನ, ಕಾರ್ವಿುಕ ಕಾಯ್ದೆ ತಿದ್ದುಪಡಿ ಪ್ರಸ್ತಾಪ ವಿರೋಧಿಸಿ ಪಟ್ಟಣದಲ್ಲಿ ಕಾಂಗ್ರೆಸ್ ವತಿಯಿಂದ ಗುರುವಾರ ಸಾಂಕೇತಿಕ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಜಿಪಂ ಸದಸ್ಯ ಎಸ್.ಪಿ. ಬಳಿಗಾರ, ಪಂಚಾಯಿತಿಗಳಿಗೆ ಚುನಾವಣೆ ನಡೆಸದೆ ಬಿಜೆಪಿ ಕಾರ್ಯಕರ್ತರನ್ನು ನಾಮನಿರ್ದೇಶನ ಮಾಡುವ ಷಡ್ಯಂತ್ರ ನಡೆದಿದೆ. ಈಗಿರುವ ಸದಸ್ಯರನ್ನು ಮುಂದುವರೆಸಿ 6 ತಿಂಗಳ ಬಳಿಕ ಚುನಾವಣೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತರ ಪಾಲಿಗೆ ಕರಾಳ ಶಾಸನವಾಗಿದ್ದು, ರೈತರನ್ನು ಕಾರ್ಪೆರೇಟ್ ಕಂಪನಿಗಳು ಹಾಗೂ ಬಂಡವಾಳ ಶಾಹಿಗಳ ಕೈಗೊಂಬೆಯಾಗಿಸುವ ಸರ್ಕಾರದ ಕ್ರಮ ಖಂಡನೀಯ ಎಂದರು.
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳು ಕೇವಲ ಘೊಷಣೆಗೆ ಮಾತ್ರ ಸೀಮಿತವಾಗಿದೆ. ಕೇಂದ್ರದ 20 ಲಕ್ಷ ಕೋಟಿ ರೂ. ಪ್ಯಾಕೇಜ್ನಲ್ಲಿ ಯಾರೊಬ್ಬರಿಗೂ ಸಹಾಯ ಲಭಿಸಿಲ್ಲ ಎಂದರು.
ಮುಖಂಡರಾದ ಯು.ಎನ್. ಹಪಳಲಾಪುರ, ಎಂ.ಎಸ್. ದೊಡ್ಡಗೌಡರ, ಚನ್ನಪ್ಪ ಜಗಲಿ, ರಾಮಣ್ಣ ಲಮಾಣಿ, ಸೋಮಣ್ಣ ಬೆಟಗೇರಿ, ಫಕೀರೇಶ ಮ್ಯಾಟೆಣ್ಣವರ, ಬಸವರಾಜ ಓದುನವರ, ಎಪಿಎಂಸಿ ಅಧ್ಯಕ್ಷ ಜೆ.ಆರ್. ಕೊಪ್ಪದ, ರಾಜರತ್ನ ಹುಲಗೂರ, ನಾಗರಾಜ ದೊಡ್ಡಮನಿ, ಮಹಾದೇವಪ್ಪ ಅಣ್ಣಿಗೇರಿ, ರಾಮು ಗಡದವರ, ಲೋಕೇಶ ದೊಡ್ಡಮನಿ, ಬಸವರಾಜ ತೋಟದ, ಅಪ್ಪಣ್ಣ ನೂಲ್ವಿ, ರಾಧಕ್ಕ ಮುದಗಲ್, ರಾಜು ಓಲೇಕಾರ, ಗ್ರಾಪಂ ಸದಸ್ಯರು, ಪಕ್ಷದ ಕಾರ್ಯಕರ್ತರು ಇದ್ದರು. ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.