ಆನೇಕಲ್: ತಾಲೂಕಿನ ಕೆರೆಗಳ ಸ್ಥಿತಿಗತಿ ಅರಿಯಲು ಆಗಮಿಸಿದ್ದ ಕೇಂದ್ರ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಸಮಿತಿ ಬುಧವಾರ ತಾಲೂಕಿನ ಹಲವು ಕೆರೆಗಳಿಗೆ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ರಾಜಕಾಲುವೆ ಒತ್ತುವರಿ ವಿಚಾರವಾಗಿ ಸ್ಥಳೀಯ ರಾಜಕೀಯ ಮುಖಂಡರು ಪರಸ್ಪರ ಜಟಾಪಟಿ ನಡೆಸಿದರು.
ತಾಲೂಕಿನ ಕೆರೆಗಳಿಗೆ ರಾಸಾಯನಿಕ ತ್ಯಾಜ್ಯವನ್ನು ನೇರವಾಗಿ ಹರಿಸಲಾಗುತ್ತಿರುವ ಆರೋಪದ ಮೇರೆಗೆ ಎನ್‌ಜಿಟಿ, ಕೆರೆಗಳ ಪರಿಶೀಲನೆಗಾಗಿ ತಂಡವನ್ನು ಕಳಿಸಿದೆ. ಈ ತಂಡವು ಬುಧವಾರ ಬೆಳಗ್ಗೆ ಚಂದಾಪುರ, ಬೊಮ್ಮಸಂದ್ರ, ವೀರಸಂದ್ರ, ಹೆಬ್ಬಗೋಡಿ ಸೇರಿ ಕೆಲವು ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸಿತು. ಜತೆಗೆ ನೀರಿನ ಮಾದರಿಯನ್ನು ಸಂಗ್ರಹಿಸಿತು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಜತೆಗೆ ಎನ್‌ಜಿಟಿ ತಂಡ ಚಂದಾಪುರ ಕೆರೆಯ ಬಳಿ ಪರಿಶೀಲನೆ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ರಾಜಕಾಲುವೆ ಮೂಲಕ ನೀರು ಹರಿದು ಬರದಿರುವ ಬಗ್ಗೆ ವಿಚಾರಣೆಗೆ ಮುಂದಾಗಿತ್ತು. ರಾಜಕಾರಣಿಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದೇ ಇದಕ್ಕೆ ಕಾರಣ ಎಂದು ಗ್ರಾಪಂ ಮಾಜಿ ಅಧ್ಯಕ್ಷ ನಾಗವೇಣಿ ಹೇಳಿದಾಗ ಸ್ಥಳದಲ್ಲಿದ್ದ ಕೆಲವು ಬಿಜೆಪಿ ಮುಖಂಡರು ನಾಗವೇಣಿ ಅವರ ಜತೆ ಮಾತಿನ ಜಟಾಪಟಿ ನಡೆಸಿದರು.
ಬೆದರಿಕೆ ಬಳಿಕ ಮಾದರಿ ಸಂಗ್ರಹ: ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಚಿತ್ತಗಾನಹಳ್ಳಿ ಕೆರೆಗೆ ನೀರು ಹರಿಯುತ್ತಿದ್ದ ನೀರಿನ ಮಾದರಿ ಸಂಗ್ರಹಿಸುವಂತೆ ಮಾಜಿ ಯೋಧ ಕ್ಯಾಪ್ಟನ್ ಸಂತೋಷ್‌ಕುಮಾರ್ ಎನ್‌ಜಿಟಿ ತಂಡವನ್ನು ಆಗ್ರಹಿಸಿದರು. ಆದರೆ, ಇದನ್ನು ಲೆಕ್ಕಿಸದೆ ತಂಡ ಸ್ಥಳದಿಂದ ತೆರಳಿತು. ನೀರಿನ ಮಾದರಿ ಸಂಗ್ರಹಿಸದಿರುವ ಬಗ್ಗೆ ಹಸಿರು ನ್ಯಾಯಾಧಿಕರಣದ ಕೋರ್ಟ್‌ಗೆ ದೂರು ಸಲ್ಲಿಸುವುದಾಗಿ ಸಂತೋಷ್‌ಕುಮಾರ್ ತಿಳಿಸಿದರು. ಈ ಹಿನ್ನೆಲೆಯಲ್ಲಿ ಮತ್ತೆ ಕಿತ್ತಗಾನಹಳ್ಳಿ ಮತ್ತು ಬೊಮ್ಮಸಂದ್ರ ಕೆರೆಗೆ ಮರಳಿದ ತಂಡ, ಕಿತ್ತಗಾನಹಳ್ಳಿ ಕೆರೆಗೆ ರಾಜಕಾಲುವೆ ಮೂಲಕ ಹರಿಯುತ್ತಿದ್ದ ನೀರಿನ ಮಾದರಿ ಸಂಗ್ರಹಿಸಿತು.
ಕಾನೂನು ಸಮರ: ವೀರಸಂದ್ರ ಕೆರೆ ಬಳಿ ಸುದ್ದಿಗಾರರ ಜತೆ ಮಾತನಾಡಿದ ನಿವೃತ್ತ ಯೋಧ ಸಂತೋಷ್ ಕುಮಾರ್, ಎನ್‌ಜಿಟಿ ತಂಡಕ್ಕೆ ಸಮರ್ಪಕ ಮಾಹಿತಿ ನೀಡದೆ ಅವರ ದಾರಿತಪ್ಪಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರದಿಂದ ಅಧಿಕಾರಿಗಳು ಬಂದರೂ ಉಪಯೋಗ ಇಲ್ಲದಂತೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಎನ್‌ಜಿಟಿ ತಂಡ ನಡೆಸಿರುವ ಪರಿಶೀಲನೆಯ ಪ್ರತಿಯೊಂದು ಕ್ಷಣವನ್ನೂ ವಿಡಿಯೋ ಮಾಡಿಕೊಂಡಿದ್ದು, ಎನ್‌ಜಿಟಿ ತಂಡದ ದಾರಿತಪ್ಪಿಸಲು ಯತ್ನಿಸಿದ ಪ್ರತಿಯೊಬ್ಬ ಅಧಿಕಾರಿಗಳ ಹೆಸರು, ಹುದ್ದೆಯ ವಿವರದ ಸಮೇತ ವಿಡಿಯೋ ತುಣುಕುಗಳನ್ನು ಬಿಡುಗಡೆ ಮಾಡಿ, ಕಾನೂನು ಸಮರ ನಡೆಸುವುದಾಗಿ ಹೇಳಿದರು.
ಮಾಧ್ಯಮದವರನ್ನು ನಿಷೇಧಿಸಲು ಯತ್ನ: ಎನ್‌ಜಿಟಿ ತಂಡದ ಕೆರೆ ಪರಿಶೀಲನೆ ವೇಳೆ ಮಾಧ್ಯಮದವರನ್ನು ದೂರ ಇರಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮಂಗಳವಾರ ಯತ್ನಿಸಿದ್ದರು. ಆದರೆ, ಇದು ಸಾಧ್ಯವಾಗಿರಲಿಲ್ಲ. ಆದರೆ, ಬುಧವಾರ ಶತಾಯಗತಾಯ ಮಾಧ್ಯಮದವರನ್ನು ದೂರ ಇಡಲೆಂದೇ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಕೆರೆ ನೀರಿನ ಮಾದರಿ ಸಂಗ್ರಹಿಸಿದ ಎನ್‌ಜಿಟಿ ತಂಡ ಅದನ್ನು ತೆಗೆದುಕೊಂಡು ಹೋಗುವಾಗ ಮಾಧ್ಯಮದವರು ಹತ್ತಿರ ಸುಳಿಯದಂತೆ ನಿರ್ಬಂಧಿಸಲು ಯತ್ನಿಸಿದರು. ಆಗ ಮಾಧ್ಯಮದವರು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳ ಯತ್ನ: ತಾಲೂಕಿನ ಯಾವೆಲ್ಲ ಕೆರೆಗಳಿಗೆ ಎಲ್ಲೆಲ್ಲಿಂದ ಅಪಾಯಕಾರಿ ತ್ಯಾಜ್ಯ ನೀರು ಹರಿಯುತ್ತದೆ ಎಂಬ ಬಗ್ಗೆ ಎನ್‌ಜಿಟಿ ತಂಡಕ್ಕೆ ಮಾಹಿತಿ ನೀಡಲು ಮಾಧ್ಯಮದವರು, ನಿವೃತ್ತ ಯೋಧ ಸಂತೋಷ್‌ಕುಮಾರ್ ಹಾಗೂ ವಿವಿಧ ಸಂಘಸಂಸ್ಥೆಗಳು ಮುಂದಾಗಿದ್ದವು. ಆದರೆ, ಈ ಮಾಹಿತಿ ದೊರೆತರೆ ತಾವು ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ ಎಂಬ ಕಾರಣಕ್ಕೆ ಎನ್‌ಜಿಟಿ ತಂಡದ ದಾರಿ ತಪ್ಪಿಸಲು ಯತ್ನಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಕಲುಷಿತ ನೀರು ಹರಿಯದಿರುವ ಸ್ಥಳಗಳಿಗೆ ತಂಡವನ್ನು ಕರೆದೊಯ್ದು ಪರಿಶೀಲನೆ ನಡೆಸುವಂತೆ ನೋಡಿಕೊಂಡರು. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.
ಕೊಳವೆಬಾವಿ ನೀರಿನ ಮಾದರಿ ಸಂಗ್ರಹ: ಬೊಮ್ಮಸಂದ್ರ ಕೆರೆಯಲ್ಲಿ ಆಗಾಗ ಬೆಂಕಿ ಕಾಣಿಸಿಕೊಂಡು ಅವಾಂತರ ಸೃಷ್ಟಿಯಾಗುತ್ತಿದೆ. ಈ ಬಗ್ಗೆ ವಿಜಯವಾಣಿ ಗಮನಸೆಳೆದಿತ್ತು. ಈ ಹಿನ್ನೆಲೆಯಲ್ಲಿ ಎನ್‌ಜಿಟಿ ತಂಡ ಬೊಮ್ಮಸಂದ್ರ ಕೆರೆಯ ಪಕ್ಕದಲ್ಲಿರುವ ಕೊಳವೆಬಾವಿಯ ನೀರಿನ ಮಾದರಿಯನ್ನು ಸಂಗ್ರಹಿಸಿ, ಪರಿಶೀಲನೆಗೆ ರವಾನಿಸಿತು.
ಕಳೆದೊಂದು ವರ್ಷದ ಹಿಂದೆ ಹಲವು ಸಂಘಸಂಸ್ಥೆಗಳ ಮನವಿ ಮೇರೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ನೀರಿನ ಮಾದರಿ ಸಂಗ್ರಹಿಸಿದ್ದರು. ಆದರೆ, ಅದರ ಪರಿಶೀಲನೆ ವರದಿ ಇನ್ನೂ ಬಿಡುಗಡೆಯಾಗಿಲ್ಲ. ಈ ಬಾರಿ ಎನ್‌ಜಿಟಿ ತಂಡ ಪರಿಶೀಲನೆಗೆ ಬಂದಿದೆ. ಈ ವರದಿಯಾದರೂ ಬಿಡುಗಡೆಯಾಗುವಂತೆ ಆಗಲಿ. ಒಂದು ವೇಳೆ ಈ ಬಾರಿಯೂ ನಿರ್ಲಕ್ಷ್ಯದಿಂದ ವರ್ತಿಸಿದರೆ, ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ. ಜಗದೀಶ್, ವಕೀಲ