ವಿರಾಜಪೇಟೆ: ಎನ್‌ಎಸ್‌ಎಸ್, ಎನ್‌ಸಿಸಿ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಲು ಸಹಾಯವಾಗುತ್ತದೆ ಎಂದು ಮೂರ್ನಾಡು ವಿದ್ಯಾಸಂಸ್ಥೆಯ ನಿರ್ದೇಶಕಿ ಎ.ಎಂ.ಶೈಲಾ ಸಲಹೆ ಅಭಿಪ್ರಾಯಪಟ್ಟರು.
ವಾಟೆಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರ್ನಾಡು ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರದಲ್ಲಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಗಳಲ್ಲಿ ಕಲಿತಿರುವ ಪಾಠಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬಹುದು ಎಂದರು.
ಕೊಡಗು ಜಿಲ್ಲಾ ಆಸ್ಪತ್ರೆಯ ಆಪ್ತ ಸಮಾಲೋಚಕಿ ಬಿ.ಅಶ್ವಿತಾ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಮಾದಕ ಚಟಗಳಿಗೆ ಬಲಿಯಾದರೆ ಅದರಿಂದ ಹೊರ ಬರುವುದು ಕಷ್ಟ ಸಾಧ್ಯ. ಇಂದಿನ ದಿನಗಳಲ್ಲಿ ಬಹುತೇಕ ಹದಿಹರೆಯದವರು ಗಾಂಜಾ, ಅಫೀಮಿನಂತಹ ಚಟಗಳಿಗೆ ಬಲಿಯಾಗುತ್ತಿದ್ದಾರೆ. ತಕ್ಷಣಕ್ಕೆ ಏನೋ ಒಂದು ಸುಖ ಸಿಗುತ್ತದೆ. ಅದೇ ಸುಖ ನಮ್ಮ ಜೀವನವನ್ನು ಬಲಿ ತೆಗೆದುಕೊಳ್ಳುತ್ತದೆ ಎಂದರು.
ವಿದ್ಯಾಸಂಸ್ಥೆಯ ಕಾರ್ಯದರ್ಶಿ ವೇಣು ಅಪ್ಪಣ್ಣ ಮಾತನಾಡಿದರು. ವಾಟೆಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಟಿ.ಟಿ.ಕುಮಾರಸ್ವಾಮಿ, ಏಕದಂತ ಯುವಕ ಸಂಘಟನೆ ಅಧ್ಯಕ್ಷ ಎಂ.ಸಿ.ದಿನೇಶ್, ಪ್ರಾಂಶುಪಾಲೆ ದೇವಕ್ಕಿ, ಕಾರ್ಯಕ್ರಮ ಅಧಿಕಾರಿ ದಮಯಂತಿ, ಉಪನ್ಯಾಸಕರಾದ ರೋಹಿಣಿ, ಸರೋಜಿನಿ ಉಪಸ್ಥಿತರಿದ್ದರು.